ಹುಬ್ಬಳ್ಳಿ-ಧಾರವಾಡ ಸುದ್ದಿ
ವಿಜಯ ಸಂಕಲ್ಪ ವೇಳೆಯೆ ಬಿಗ್ ಶಾಕ್

ವಿಜಯ ಸಂಕಲ್ಪ ವೇಳೆಯೆ ಬಿಗ್ ಶಾಕ್

ಬಿಜೆಪಿಗೆ ಲಿಂಬಿಕಾಯಿ ಗುಡ್‌ಬೈ

ಪ್ರಭಾವಿ ಲಿಂಗಾಯತ ಮುಖಂಡ ಕಾಂಗ್ರೆಸ್‌ಗೆ

ಹುಬ್ಬಳ್ಳಿ: ವಿಜಯ ಸಂಕಲ್ಪ ಯಾತ್ರೆ ಧಾರವಾಡ ಜಿಲ್ಲೆ ಹಾಗೂ ಮಹಾನಗರದಲ್ಲಿ ನಡೆಯುತ್ತಿರುವಾಗಲೇ ಭಾರತೀಯ ಜನತಾ ಪಕ್ಷಕ್ಕೆ ಪಂಚಮಸಾಲಿ ಸಮುದಾಯದ ಪ್ರಭಾವಿ ಮುಖಂಡ, ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಗುಡ್ ಬೈ ಹೇಳಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಲಿಂಬಿಕಾಯಿ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರುವುದನ್ನು ಖಚಿತಪಡಿಸಿದ್ದಾರೆ.


ರಾಹುಲ್‌ಗಾಂಧಿಯವರು ದಿ.20ಕ್ಕೆ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ಮುಖಂಡರುಗಳ ಪೂರ್ವಭಾವಿ ಸಭೆಯು ಕುಂದಾನಗರಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದು ಮಧ್ಯಾಹ್ನ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ, ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಲಿಂಬಿಕಾಯಿ ಕಮಲ ಹೊರೆ ಇಳಿಸಿ ಕೈ ಬಾವುಟ ಹಿಡಿಯಲಿದ್ದಾರೆ.
ಪದವೀಧರ ಕ್ಷೇತ್ರದ ಕೈ ಭದ್ರ ಕೋಟೆ ಬೇಧಿಸಿ ಎಚ್.ಕೆ.ಪಾಟೀಲರ ವಿರುದ್ಧ ದಿಗ್ವಿಜಯ ಸಾಧಿಸಿದ್ದ ಲಿಂಬಿಕಾಯಿ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರಾಗಿದ್ದು ಅವರು ಸಿಎಂ ಆಗಿದ್ದ ವೇಳೆ ಕಾನೂನು ಸಲಹೆಗಾರರಾಗಿ ಮಹತ್ವದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು.


ಕಳೆದ 2022ರಲ್ಲಿ ನಡೆದ ಶಿಕ್ಷಕರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಹೊರಟ್ಟಿ ವಿರುದ್ಧ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರಲ್ಲದೇ, ಆ ನಿಟ್ಟಿನಲ್ಲಿ ಅವಿಭಾಜ್ಯ ಧಾರವಾಡ ಹಾಗೂ ಕಾರವಾರ ಜಿಲ್ಲೆಯಲ್ಲೂ ಕಮಲ ಅರಳಿಸುವ ಸ್ಕೆಚ್ ಹಾಕಿದ್ದರು. ಆದರೆ ಏಕಾಏಕಿ ಹೊರಟ್ಟಿಯವರನ್ನೆ ಪಕ್ಷಕ್ಕೆ ಸೇರಿಸಿಕೊಂಡು ಆಪರೇಷನ್ ಮಾಡಿದ ಪರಿಣಾಮ ಕಣದಿಂದ ಹೊರಗುಳಿಯಬೇಕಾಗಿತ್ತು. ಅಲ್ಲದೇ ಬಿಜೆಪಿ ನಾಯಕರ ವರ್ತನೆಯಿಂದ ಬೇಸತ್ತಿದ್ದ ಲಿಂಬಿಕಾಯಿ ಕಾಂಗ್ರೆಸ್ ಸೇರುವರೆಂಬ ಗುಸು ಗುಸು 2-3 ತಿಂಗಳಿನಿಂದ ಕೇಳಿ ಬರುತ್ತಲೆ ಇತ್ತು. ಪ್ರಬಲ ಸಮುದಾಯದ ಪ್ರಭಾವಿ ಮುಖಂಡನನ್ನು ಸೆಳೆಯುವಲ್ಲಿ ಕೊನೆಗೂ ಕಾಂಗ್ರೆಸ್ ಯಶಸ್ವಿಯಾಗಿದೆ. ವಿಜಯ ಸಂಕಲ್ಪ ವೇಳೆಯೆ ಬಿಜೆಪಿಗೆ ಬಿಗ್ ಶಾಕ್ ತಟ್ಟಿದೆ. ಹು.ಧಾ. ಪಶ್ಚಿಮ, ಕಲಘಟಗಿ, ನವಲಗುಂದ ಕ್ಷೇತ್ರಗಳಲ್ಲಿ ಸೇರಿದಂತೆ ಜಿಲ್ಲೆಯಾದ್ಯಂತ ಲಿಂಬಿಕಾಯಿ ತಮ್ಮದೇ ಪ್ರಭಾವ ಹೊಂದಿದವರಾಗಿದ್ದಾರೆ.

ಬಿಜೆಪಿ ಇಂದು ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಬೇಷರತ್ತಾಗಿ ಸೇರುತ್ತಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಪ್ರಾಮಾಣಿಕವಾಗಿ ನಿರ್ವಹಿಸುವೆ.


ಮೋಹನ ಲಿಂಬಿಕಾಯಿ, ಮಾಜಿ ವಿಧಾನಪರಿಷತ್ ಸದಸ್ಯರು

administrator

Related Articles

Leave a Reply

Your email address will not be published. Required fields are marked *