ಧಾರವಾಡ-71 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತಾ?
ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ಈ ಕುರಿತು ಸಮಾಲೋಚನೆ ನಡೆಸಿ ಅಂತಿಮಗೊಳಿಸಿರುವುದಾಗಿ ತಿಳಿದು ಬಂದಿದೆ.
ವಿನಯ ಕುಲಕರ್ಣಿ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯದ ನಿಷೇಧ ಇರುವ ಕಾರಣದಿಂದ, ಈ ಹಿಂದೆ ವಿನಯ ಪ್ರತಿನಿಧಿಸಿದ್ದ ಧಾರವಾಡ-71 ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದೆ.
ಅಲ್ಲದೇ ಪಂಚಮಸಾಲಿ ಸಮುದಾಯದ ವಿನಯ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದವರು. ಪಂಚಮಸಾಲಿ ಸಮುದಾಯದ ಮಿಸಲಾತಿ ಕುರಿತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಲುವಿನ ಬಗ್ಗೆ ಹೋರಾಟ ಗಾರರಲ್ಲಿ ಅಸಮಾಧಾನ ಕೂಡ ಇದೆ. ಇನ್ನೊಂದೆಡೆ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಶಿಗ್ಗಾಂವಿಯಲ್ಲಿ ಪಂಚಮಸಾಲಿ ಸಮಾಜದ ಮತಗಳು ಕೂಡ ನಿರ್ಣಾಯಕವಾಗಿವೆ.
ಇದೇ ಅಂಶವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಾಗಲಿದೆ ಎಂಬುದು ಹೈಕಮಾಂಡ್ನ ಲೆಕ್ಕಾಚಾರ. ಈ ಮಧ್ಯೆ ವಿನಯ ಕುಲಕರ್ಣಿ ಕೂಡ ದೆಹಲಿಯಲ್ಲಿ ಇದ್ದು, ಪಕ್ಷದ ವರಿಷ್ಠರ ಸಂಪರ್ಕ ಸಾಧಿಸಿದ್ದಾರೆ. ಆದರೆ, ಹೈಕಮಾಂಡ್ಗೆ ವಿನಯ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದು ನಿಗೂಢವಾಗಿದೆ.
ಒಂದು ವೇಳೆ ವಿನಯ ಕುಲಕರ್ಣಿ ಹೈಕಮಾಂಡ್ ತೀರ್ಮಾನಕ್ಕೆ ಸಮ್ಮತಿಸಿದರೆ, ಧಾರವಾಡ-71 ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಹುಡುಕಾಟ ಅನಿವಾರ್ಯವಾಗಲಿದೆ.