ಹುಬ್ಬಳ್ಳಿ-ಧಾರವಾಡ ಸುದ್ದಿ

ಕನ್ನಡ ಕಡ್ಡಾಯ ಕಾಯಿದೆ ತಕ್ಷಣ ಜಾರಿಯಾಗಲಿ

15ನೇ ಜಿಲ್ಲಾ ನುಡಿಹಬ್ಬಕ್ಕೆ ಅದ್ಧೂರಿ ಚಾಲನೆ

ಹುಬ್ಬಳ್ಳಿ ( ಡಾ.ಡಿ.ಎಸ್.ಕರ್ಕಿ ವೇದಿಕೆ ) : ಸಾವಿರಾರು ವರ್ಷಗಳ ಇತಿಹಾಸ ಇರುವ ಬಹು ದೊಡ್ಡ ಭಾಷೆ ಹಿರಿಮೆಯ ಕನ್ನಡ ಭಾಷೆ ಕಳೆದ ಮೂರು ದಶಕಗಳಿಂದ ತೀವ್ರ ಆತಂಕ ಎದುರಿಸುತ್ತಿದ್ದು, ಕೂಡಲೇ ಕನ್ನಡ ಭಾಷಾ ಸಮಗ್ರ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ಶೀಘ್ರ ಕಾನೂನು ರೂಪದಲ್ಲಿ ಜಾರಿಯಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಧರಣೇಂದ್ರ ಕುರಕುರಿ ಹೇಳಿದರು.

ಹುಬ್ಬಳ್ಳಿಯ ಸವಾಯಿ ಗಂರ್ಧರ್ವ ಕಲಾಮಂದಿರದಲ್ಲಿಂದು ಆರಂಭಗೊಂಡ 15ನೇ ಜಿಲ್ಲಾ ನುಡಿ ಹಬ್ಬವನ್ನು ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಧರಣೇಂದ್ರ ಕುರಕುರಿ, ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ,ಶ್ಯಾಮಸುಂದರ ಬಿದರಕುಂದಿ, ಡಾ.ರಮಾಕಾಂತ ಜೋಶಿ, ಪ್ರೋ.ಕೆ.ಎಸ್.ಕೌಜಲಗಿ, ಲಿಂಗರಾಜ ಪಾಟೀಲ, ಗುರುಸಿದ್ದಪ್ಪ ಬಡಿಗೇರ, ಚನ್ನಬಸಪ್ಪ ಧಾರವಾಡಶೆಟ್ಟರ ಸೇರಿದಂತೆ ಕಸಾಪ ಪದಾಧಿಕಾರಿಗಳು ಇದ್ದರು.

ಸವಾಯಿ ಗಂಧರ್ವ ಹಾಲ್‌ನಲ್ಲಿಂದು 15ನೇ ಜಿಲ್ಲಾ ನುಡಿ ಹಬ್ಬದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಪಕ್ಕದ ರಾಜ್ಯದಿಂದ ವಲಸೆ ಬರುವ ಜನರ ಭಾಷೆ, ಇಂಗ್ಲಿಷ ಭಾಷೆ ವ್ಯಾಮೋಹ, ಇಂಗ್ಲೀಷ ಶಿಕ್ಷಣದ ಮಾಧ್ಯಮವಾಗಿರುವುದು, ಪುಸ್ತಕಗಳನ್ನು ಕೊಂಡು ಓದುವ ಕೊರತೆ ಇವುಗಳಿಂದ ಕನ್ನಡ ಭಾಷೆ ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಪಡೆದು ಶೀಘ್ರ ಕಾನೂನು ಜಾರಿಯಾದಲ್ಲಿ ಕನ್ನಡ ತನ್ನತನ ಉಳಿಸಿಕೊಳ್ಳಲಿದೆ ಎಂದರು.

ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾ ಭವನದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ನಡೆದ ಅಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿಯವರ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಹೊರ ರಾಜ್ಯದಿಂದ ಬಂದವರೆಲ್ಲ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ. ನಾವು ಕನ್ನಡಿಗರು ಉದಾರಿಗಳು ಅವರಿಗೆ ಹೊಂದಿಕೊಂಡು ಅವರ ಭಾಷೆ ಕಲಿತು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇವೆ. ಹಾಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಅನಾಥವಾಗಬಾರದು ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲೇ ಮಾತನಾಡಬೇಕೆಂಬ ಕಾನೂನು ಜಾರಿಯಾಗುವಂತೆ ನೋಡಿಕೊಳ್ಳಬೆಕು. ರಾಜಭಾಷ ಆಯೋಗ ರಚಿಸಲಾಗುತ್ತದೆ ಎಂದು ಹೇಳಲಾಗಿದ್ದು, ಈ ಸಮಿತಿಯು ಜಿಲ್ಲಾಮಟ್ಟದ ಸಮಿತಿಗಳನ್ನು ನೇಮಿಸಲಿದ್ದು, ಇದು ಕನ್ನಡದ ಬೆಳವಣಿಗೆಗೆ ಸಹಾಯವಾಗಬಹುದೆಂದರು.


ಆಶಯ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಕನ್ನಡ ಮನಸ್ಸಿನ ಭಾಷೆ, ಭಾವನೆಯ ಭಾಷೆ,ನಮ್ಮ ಮಾತೃಭಾಷೆ ಬಗ್ಗೆ ನಮಗೆ ಅಭಿಮಾನ ಇದೆ,ಆದರೆ ಪ್ರೀತಿ ಇಲ್ಲ.ಕೇವಲ ಅಭಿಮಾನ ಸಾಲದು ಅದು ಕೃತಿ ರೂಪದಲ್ಲಿ ಬರಬೇಕು ಎಂದು ಹೇಳಿದರು.
ಕನ್ನಡ ಆಂಗ್ಲ ಭಾಷೆಯ ಜತೆಯೇ ಬೆಳೆದು ತನ್ನತನ ಉಳಿಸಿಕೊಳ್ಳಬೇಕು.ಕನ್ನಡ ಕಡ್ಡಾಯ ಕಾಯಿದೆ ಜಾರಿಯಾಗುತ್ತಿಲ್ಲ. ಕನ್ನಡ ನಿಂತ ನೀರಾಗದೆ ಹರಿಯುವ ನೀರಾಗಬೇಕು.ಕನ್ನಡದ ಗುಣಗಳನ್ನು ವ್ಯಕ್ತ ಮಾಡಲು ಇಂತಹ ಸಮ್ಮೇಳನಗಳು ಅಗತ್ಯ ಎಂದು ಹೇಳಿದರು.

ಆರಂಭದಲ್ಲಿ ಸ್ವಾಗತಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಜಿಲ್ಲಾ ಮತ್ತು ತಾಲೂಕಿನ ಸಮ್ಮೇಳನಗಳಿಗೆ ಹೆಚ್ಚಿನ ಅನುದಾನ ಆವಶ್ಯಕ.ಅಲ್ಲದೇ ಡಾ.ಎಂ.ಎಂ.ಕಲಬುರ್ಗಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸುವುದಾಗಿ ಪ್ರಕಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ರಮಾಕಾಂತ ಜೋಶಿ ಪರಿಷತ್ ಧ್ವಜ ಹಸ್ತಾಂತರಿಸಿದರು.

ಬೆಳಿಗ್ಗೆ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ರಾಷ್ಟ್ರಧ್ವಜಾರೋಹಣ ನಡೆಸಲಾಯಿತು. ಬೆಳಿಗ್ಗೆ ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ದೇಶಪಾಂಡೆ ನಗರ ಪ್ರವಾಸಿ ಮಂದಿರದಿಂದ ಸವಾಯಿ ಗಂದರ್ವ ಸಭಾಭವನದ ತನಕ ಕನ್ನಡ ಜಾಗೃತಿ ನಡಿಗೆ ನಡೆಯಿತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಪ್ರೋ.ಕೆ.ಎಸ್.ಕೌಜಲಗಿ, ಡಾ.ಜಿನದತ್ತ ಹಡಗಲಿ,ಎಫ್.ಬಿ.ಕಣವಿ, ಡಾ.ಎಸ್.ಎಸ್.ದೊಡ್ಡಮನಿ ಮುಂತಾದವರಿದ್ದರು.

ಮಹದಾಯಿ ಪ್ರಸ್ತಾಪ – ಮಹಾ ಕಿರಿಕಿರಿ ಖಂಡನೆ

ತಮ್ಮ ಭಾಷಣದಲ್ಲಿ ಕಳಸಾ ಬಂಡೂರಿ ಸಮಸ್ಯೆಯನ್ನು ಪ್ರಸ್ತಾಪಿಸಿದ ಪ್ರೊ.ಕುರಕುರಿ 35 ಕಿ.ಮೀ. ಕರ್ನಾಟಕದಲ್ಲಿ ಹರಿದ ಮಹದಾಯಿ ನದಿ, ಗೋವಾ ರಾಜ್ಯದಲ್ಲಿ 45 ಕಿ.ಮೀ. ಹರಿಯುತ್ತದೆ. ಅಂದಮೇಲೆ ಅರ್ಧ ನೀರು ನಮ್ಮ ಹಕ್ಕು. ನೀರಿನ ಹಂಚಿಕೆಯಲ್ಲಿ ನಮ್ಮ ಪಾಲು ನಿಗದಿಯಾಗಬೇಕು. ಹುಬ್ಬಳ್ಳಿ ಧಾರವಾಡ ಒಳಗೊಂಡು 13 ಊರುಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸುವ ಯೋಜನೆಗೆ ಗೋವಾ ಕಿರಿಕಿರಿ ಮಾಡುತ್ತಿರುವುದು ಸರಿಯಲ್ಲ. ಇದಕ್ಕೊಂಡು ಮಂಗಳವನ್ನು ಕೇಂದ್ರ ಸರಕಾರ ಹಾಡಬೇಕು ಎಂದರಲ್ಲದೇ ಗಡಿಭಾಗದ ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಅವರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಮಹಾರಾಷ್ಟ್ರದ ಕುತಂತ್ರವನ್ನು ಅವರು ಖಂಡಿಸಿದರು.

 

administrator

Related Articles

Leave a Reply

Your email address will not be published. Required fields are marked *