ನಾಯಕರ ಧೋರಣೆಯಿಂದ ಸಿಡಿದೆದ್ದ ಪಶ್ಚಿಮದ ಆಕಾಂಕ್ಷಿಗಳು
ಧಾರವಾಡ: ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ಕೊಡದಿದ್ದರೆ, ನಮ್ಮೊಳಗೆ ಒಬ್ಬರನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್.ನೀರಲಕೇರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಕಾಂಗ್ರೆಸ್ ಟಿಕೆಟ್ ಬಯಸಿ ಒಟ್ಟು 11 ಜನ ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಒಲವಿದೆ. ಇದು ಚುನಾವಣೆಯಲ್ಲಿ ಪ್ರತಿಫಲ ಸಿಗಲಿದೆ. ಇದಕ್ಕೆ ಇಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಶ್ರಮವಿದೆ. ಇದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದರು.
ನಮ್ಮನ್ನು ಹೊರತುಪಡಿಸಿ ಇದೀಗ ಪಕ್ಷ ಸೇರ್ಪಡೆಯಾದ ಮೋಹನ ಲಿಂಬಿಕಾಯಿ ಅವರನ್ನು ಅಭ್ಯರ್ಥಿ ಮಾಡಲು ಹೊರಟಿರುವುದು ದುರ್ದೈವದ ಸಂಗತಿ. ಕ್ಷೇತ್ರದಲ್ಲಿನ ವಾಸ್ತವ ಸ್ಥಿತಿ ಮತ್ತು ಜನರ ನಾಡಿಮಿಡಿತ ಅರಿಯದೇ ಯಾರನ್ನೋ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಸರಿಯಲ್ಲ. ಕೆಲ ದಿನಗಳ ಹಿಂದೆ ಪಕ್ಷಕ್ಕೆ ಬಂದ ಬೇರೊಬ್ಬ ವ್ಯಕ್ತಿಯನ್ನು ಕಣಕ್ಕಿಳಿಸುವುದು ನಿಷ್ಠಾವಂತರಿಗೆ ಅನ್ಯಾಯವಾಗಲಿದೆ. ಈ ವಿಷಯ ವರಿಷ್ಠರಾದ ರಾಹುಲ ಗಾಂಧಿ ಅವರ ಗಮನಕ್ಕೂ ತರುತ್ತೇವೆ. ಪಕ್ಷದ ಹೈಕಮಾಂಡ್ ಸೂಕ್ತ ನಿರ್ಣಯ ಕೈಕೊಳ್ಳುವ ವಿಶ್ವಾಸವಿದೆ ಎಂದರು.
ಆಕಸ್ಮಾತ್ ರಾಜ್ಯ ಕಾಂಗ್ರೆಸ್ ನಾಯಕರು ಇದೇ ಧೋರಣೆ ಮುಂದು ವರೆಸಿದರೆ, ಕ್ಷೇತ್ರದ ಜನರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿ ನಮ್ಮ ಮುಂದಿನ ತೀರ್ಮಾನ ಕೈಕೊಳ್ಳುತ್ತೇವೆ.ಪಶ್ಚಿಮ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದ ಸುರ್ಜೆವಾಲರಿಂದ ಪಕ್ಷಕ್ಕೆ ಯಾವುದೇ ಲಾಭವಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಿತ್ತೂರ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಸಿದ್ದಣ್ಣ ಕಂಬಾರ, ವಿರುಪಾಕ್ಷಪ್ಪ ಕೊಂಗವಾಡ ಗೋಷ್ಠಿಯಲ್ಲಿದ್ದರು.
ದಿಕ್ಕು ತಪ್ಪಿಸುತ್ತಿರುವ ಸುರ್ಜೆವಾಲ
ಕಾಂಗ್ರೆಸ್ ಪಕ್ಷದ ಸ್ಥಳಿಯ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಆಲಿಸುವ ಕೆಲಸವನ್ನು ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಮಾಡುತ್ತಿಲ್ಲ. ಇದು ಪಕ್ಷದ ಹಿತದೃಷ್ಠಿಯಿಂದ ಕೂಡ ಸರಿಯಲ್ಲ. ಅಲ್ಲದೇ ಕಾರ್ಯಕರ್ತರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲ. ಹು-ಧಾ ಪಶ್ಚಿಮ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದ ಸುರ್ಜೆವಾಲರಿಂದ ಪಕ್ಷಕ್ಕೆ ಯಾವುದೇ ಲಾಭವಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.