ವಿನಯ ಕುಲಕರ್ಣಿ 71ನೇ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಲಿ:
ಕಾರ್ಯಕರ್ತರ ಅಭಿಮಾನಿಗಳಿಂದ ರಕ್ತದಲ್ಲಿ ಪತ್ರ ಬರೆದು ಮನವಿ
ಧಾರವಾಡ: ವಿನಯ ಕುಲಕರ್ಣಿ ಆಗೇ ಬಡೊ ಹಮ್ ತುಮಾರೇ ಸಾಥ್ ಹೈ…, ಜೋರ್ ಸೇ ಬೊಲೋ ಪ್ಯಾರ ಸೇ ಬೊಲೋ ವಿನಯ ಕುಲಕರ್ಣಿ… ಈ ರೀತಿ ಕೂಗೂ ಕೇಳಿ ಬಂದಿದ್ದು ಇಲ್ಲಿನ ಬಾರಾಕೋಟ್ರಿಯಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆಯ ಮುಂದೆ.
ಧಾರವಾಡ-71 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅವರ ಮನೆ ಮುಂದೆ ಧರಣಿ ನಡೆಸಿದರು.
ಧಾರವಾಡ-71 ಕ್ಷೇತ್ರದ ಜೊತೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದೆ.
ಧಾರವಾಡ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೈಕೊಂಡಿದ್ದಾರೆ. ಅಲ್ಲದೇ ಜನರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡ ಜನಪ್ರಿಯ ನಾಯಕರಾಗಿದ್ದಾರೆ. ಆದ್ದರಿಂದ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ವಿನಯ ಕುಲಕರ್ಣಿ ಶೀಘ್ರ ತೀರ್ಮಾನ ಕೈಕೊಳ್ಳಬೇಕು. ಪಕ್ಷದ ವರಿಷ್ಠರು ಕೂಡ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಪರಮೇಶ ಕಾಳೆ, ಚನಬಸಪ್ಪ ಮಟ್ಟಿ, ಅಣ್ಣಪ್ಪ ಚಿನಗುಡಿ, ಕಿಶೋರ ಬಡಿಗೇರ, ಮಂಜು ಭೀಮಕ್ಕನವರ, ಐ.ಎಸ್.ಏಣಗಿ, ನಂದೀಶ ನಾಯ್ಕರ, ಗೌರಮ್ಮ ಬಳೋಗಿ, ಬಸವರಾಜ ಜಾಧವ, ಆಸೀಫ್, ನವೀನ ಕದಂ ಮತ್ತಿತರರು ಧರಣಿಯಲ್ಲಿದ್ದರು.