ಹುಬ್ಬಳ್ಳಿ-ಧಾರವಾಡ ಸುದ್ದಿ
ವಿನಯ ಕುಲಕರ್ಣಿ ಸ್ಪರ್ಧೆಯ ಕ್ಷೇತ್ರ ಸಂಜೆಯೊಳಗೆ ಅಂತಿಮ

ವಿನಯ ಕುಲಕರ್ಣಿ ಸ್ಪರ್ಧೆಯ ಕ್ಷೇತ್ರ ಸಂಜೆಯೊಳಗೆ ಅಂತಿಮ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸ್ಪರ್ಧಿಸುವ ಕ್ಷೇತ್ರ ಬಹುತೇಕ ಇಂದು ಪ್ರಕಟವಾಗುವ ಸಂಭವವಿದೆ.
ಈಗಾಗಲೇ ದೆಹಲಿಯಲ್ಲಿರುವ ಕುಲಕರ್ಣಿ ಅವರು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.


ಈ ಹಿಂದೆ ಎರಡು ಬಾರಿ ಆಯ್ಕೆಯಾಗಿರುವ ಧಾರವಾಡ-71 ಕ್ಷೇತ್ರದಲ್ಲಿ ಪುನಃ ಸ್ಪರ್ಧೆಬಯಸಿ ವಿನಯ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಪಂ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನ್ಯಾಯಾಲಯದ ನಿರ್ಬಂಧ ಇರುವ ಕಾರಣದಿಂದ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿ ಸೂಚನೆ ಕೂಡ ನೀಡಿತ್ತು. ನಂತರ ಅವರು ಪಕ್ಷದ ಸೂಚನೆಯಂತೆ ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಸುದ್ದಿ ಹೊರಬಿದ್ದಿತ್ತು.


ಇನ್ನೊಂದೆಡೆ ಪ್ರಬಲ ಪಂಚಮಸಾಲಿ ಸಮುದಾಯದ ವಿನಯ ಕುಲಕರ್ಣಿಯಂಥ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಕ್ಕರ್ ಕೊಡುವ ಲೆಕ್ಕಾಚಾರ ಕಾಂಗ್ರೆಸ್ಸಿನದ್ದಾಗಿತ್ತು. ಆದರೆ, ಶಿಗ್ಗಾಂವಿಯಲ್ಲಿ ತಾವು ಸ್ಪರ್ಧಿಸುವುದಾದರೆ, ಧಾರವಾಡ-71 ಕ್ಷೇತ್ರಕ್ಕೆ ತಮ್ಮ ಪತ್ನಿಗೆ ಅವಕಾಶ ಕಲ್ಪಿಸಬೇಕು ಎಂಬ ವಿನಯ ಅವರ ಕೋರಿಕೆ ಈಡೇರಿಸಲು ವರಿಷ್ಠರು ಹಿಂದೇಟು ಹಾಕಿದ್ದರು.

ಇದೇ ವೇಳೆ ಧಾರವಾಡ-71 ಕ್ಷೇತ್ರದಿಂದಲ್ಲೇ ಸ್ಪರ್ಧಿಸುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಒತ್ತಾಯ ಕೂಡ ಮಾಡುತ್ತಿರುವುದರಿಂದ, ವಿನಯ ಕುಲಕರ್ಣಿಯವರು ಶಿಗ್ಗಾಂವಿ ಬದಲು ಧಾರವಾಡದಲ್ಲಿಯೇ ಅವಕಾಶ ಕಲ್ಪಿಸುವಂತೆ ವರಿಷ್ಠರ ಬಳಿ ನಿವೇದಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.


ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್ ವರಿಷ್ಠರು ಇಂದು ಅಥವಾ ನಾಳೆ ಪ್ರಕಟಿಸಲಿರುವ ಎರಡನೇ ಪಟ್ಟಿಯ 100 ಅಭ್ಯರ್ಥಿಗಳಲ್ಲಿ ಧಾರವಾಡ-71 ಕ್ಷೇತ್ರಕ್ಕೆ ವಿನಯ ಅವರ ಹೆಸರನ್ನು ಅಂತಿಮಗೊಳಿಸ ಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಧಾರವಾಡ-71 ಕ್ಷೇತ್ರದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಜೊತೆಗೆ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಲೆಕ್ಕಾಚಾರ ಸಹ ಮುಂದುವರೆಯಲಿದೆ.

administrator

Related Articles

Leave a Reply

Your email address will not be published. Required fields are marked *