ಕಲಘಟಗಿಗೆ ಸಂತೋಷ ಲಾಡ್, ಧಾರವಾಡ ಗ್ರಾಮೀಣಕ್ಕೆ ವಿನಯ ಕುಲಕರ್ಣಿ ಫೈನಲ್
ಇನ್ನು 58 ಅಭ್ಯರ್ಥಿಗಳಿಗಾಗಿ ತೀವ್ರ ಕಸರತ್ತು: ಧಾರವಾಡ ಜಿಲ್ಲೆಯ ನಾಲ್ಕು ಸ್ಥಾನ: ಇನ್ನೂ ಸಸ್ಪೆನ್ಸ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇಂದು 42 ಮಂದಿ ಅಭ್ಯರ್ಥಿಗಳ ೨ನೇ ಪಟ್ಟಿ ಪ್ರಕಟಿಸಿದೆ.
ಇನ್ನು ಶಿಗ್ಗಾವ್ ನಲ್ಲಿ ಬಸವರಾಜ ಬೊಮ್ಮಾಯಿ ಎದುರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರಾವಾಡದಿಂದಲೇ ಕಣಕ್ಕಿಳಿಸಲಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಟಿಕೆಟ್ ಪಡೆದರೆ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಕಲಘಟಗಿ ಕ್ಷೇತ್ರದಿಂದ ಸಂತೋಷ್ ಲಾಡ್, ಮುಧೋಳದಿಂದ ಆರ್.ಬಿ.ತಿಮ್ಮಾಪುರ, ಬೀಳಗಿಯಿಂದ ಜಿ.ಟಿ.ಪಾಟೀಲ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಕದೆ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್ ಬೆಂಬಲಿಸಲಿದೆ.
ನೆರೆಯ ಯಲ್ಲಾಪುರ ಮುಂಡಗೋಡ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ, ಶಿರಸಿಗೆ ಭೀಮಣ್ಣ ನಾಯ್ಕ ಅಂತಿಮಗೊಂಡಿದ್ದು, ಸವದತ್ತಿಗೆ ವಿಶ್ವಾಸ ವೈದ್ಯ, ಕಿತ್ತೂರ ಬಾಬಾಸಾಹೇಬ ಪಾಟೀಲ, ಗೋಕಾಕ್ಗೆ ಮಹಾಂತೇಶ ಕಡಾಡಿ ,ಗಂಗಾವತಿಗೆ ಇಕ್ಬಾಲ್ ಅನ್ಸಾರಿ ಅಂತಿಮಗೊಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆದಿತ್ತು.
ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಇನ್ನೂ 58 ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದ್ದು, ಎರಡು ಹಂತದಲ್ಲಿ ಪ್ರಕಟಗೊಳ್ಳಬಹುದು ಎನ್ನಲಾಗಿದೆ.
ಜಾತಿ ಹಾಗೂ ಗೆಲ್ಲುವ ಅರ್ಹತೆಗಳನ್ನು ಮಾನದಂಡವಾಗಿಟ್ಟು ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂಬ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ತಕರಾರು ತೆಗೆದಿರುವುದರಿಂದ ಉಳಿದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪರಿಷ್ಕರಣೆಗೆ ಒಳಪಟ್ಟಿದೆ.
ಧಾರವಾಡ ಜಿಲ್ಲೆಯ ನಾಲ್ಕು ಸ್ಥಾನ: ಇನ್ನೂ ಸಸ್ಪೆನ್ಸ್
ಹುಬ್ಬಳ್ಳಿ: ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಪೂರ್ವ ಕ್ಷೇತ್ರದ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅಂತಿಮಗೊಂಡಿದ್ದರೆ ಎರಡನೆ ಪಟ್ಟಿಯಲ್ಲಿ ಉಳಿದ 6 ಕ್ಷೇತ್ರದ ಪೈಕಿ ಇಬ್ಬರನ್ನಷ್ಟೆ ಅಂತಿಮಗೊಳಿಸಿದೆ.
ಮಾಜಿ ಸಚಿವ ವಿನಯ ಕುಲಕರ್ಣಿ ಶಿಗ್ಗಾಂವದಿಂದಲೋ ಅಥವಾ ಧಾರವಾಡ ಗ್ರಾಮೀಣದಿಂದಲೋ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಧಾರವಾಡ 71ರಿಂದಲೇ ಕಣಕ್ಕಿಳಿಯಲಿದ್ದು ಅಖಾಡಕ್ಕೆ ಹೊಸ ಕಳೆಗಟ್ಟಿದೆ.ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿಗೆ ಬಿಜೆಪಿಯವರು ಮಣೆ ಹಾಕುವರೋ ಇತರ ಆಕಾಂಕ್ಷಿಗಳನ್ನು ಪರಿಗಣಿಸುವರೋ ಕಾದು ನೋಡಬೇಕಿದೆ.
ಸಂತೋಷ ಲಾಡ್ ಹಾಗೂ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ನಡುವಣ ತೀವ್ರ ಜಿದ್ದಾಜಿದ್ದಿಯಲ್ಲಿ ಕೊನೆಗೂ ಅಳೆದು ತೂಗಿ ಲಾಡ್ರನ್ನೇ ಕಣಕ್ಕಿಳಿಸಿದ್ದು, ಛಬ್ಬಿ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಇನ್ನೂ ಜಿಲ್ಲೆಯಲ್ಲಿನ ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್, ಪಶ್ಚಿಮ.ಕುಂದಗೋಳ ಅಲ್ಲದೇ ನವಲಗುಂದದ ಸಸ್ಪೆನ್ಸ್ ಮುಂದುವರಿದಿದೆ. ಇಂದು ನವಲಗುಂದ ಅಲ್ಲದೇ ಕುಂದಗೋಳ ಅಖೈರಾಗಲಿದೆ ಎಂಬ ಖಚಿತ ಮಾಹಿತಿಯಿದ್ದರೂ ಎರಡನೆ ಪಟ್ಟಿಯಲ್ಲಿ ಪ್ರಕಟಗೊಂಡಿಲ್ಲ.
ನವಲಗುಂದದಲ್ಲಿ ಮಾಜಿ ಶಾಸಕ ಎನ್ .ಎಚ್.ಕೋನರೆಡ್ಡಿ ಅಲ್ಲದೇ ವಿನೋದ ಅಸೂಟಿ ಇಬ್ಬರಲ್ಲೊಬ್ಬರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ. ಪಶ್ಚಿಮದಲ್ಲಿ ಪೈಪೋಟಿ ತೀವ್ರವಾಗಿದ್ದು ಅಂತಿಮವಾಗಿ ಅಲ್ಪಸಂಖ್ಯಾತರಿಗೆ ನೀಡಬಹುದೆನ್ನಲಾಗಿದೆ.ಕಳೆದ ಬಾರಿ ಸ್ಪರ್ಧಿಸಿದ್ದ ಇಸ್ಮಾಯಿಲ್ ತಮಾಟಗಾರ ಈ ಕ್ಷೇತ್ರ ನಿರಾಕರಿಸಿದ್ದು ಹಿರಿಯ ಧುರೀಣ, ಹುಬ್ಬಳ್ಳಿ ಅಂಜುಮನ್ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಅವರ ಹೆಸರು ಮುನ್ನೆಲೆಗೆ ಬಂದಿದೆ. ಸೆಂಟ್ರಲ್ ಹಾಗೂ ಕುಂದಗೋಳದ ವಿಷಯದಲ್ಲೂ ಸವಿಸ್ತಾರ ಚರ್ಚೆ ನಡೆದಿದ್ದು ಮೂರನೇ ಪಟ್ಟಿಯಲ್ಲಿ ಅಂತಿಮಗೊಳ್ಳಬಹುದೆನ್ನಲಾಗಿದೆ.
- ಉಡುಪಿ – ಪ್ರಸಾದ್ ರಾಜ್ ಕಾಂಚನ್
- ಕಡೂರು- ಆನಂದ್ ಕೆ.ಎಸ್
- ಕಲಘಟಗಿ – ಸಂತೋಷ್ ಲಾಡ್
- ವಿನಯ್ ಕುಲಕರ್ಣಿ- ಧಾರವಾಡ
- ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
- ಗುಬ್ಬಿ- ಶ್ರೀನಿವಾಸ್
- ಬದಾಮಿ- ಚಿಮ್ಮನಕಟ್ಟಿ
- ಹೊಳಲ್ಕೆರೆ – ಎಚ್.ಆಂಜನೇಯ
- ಮಡಿಕೇರಿ- ಡಾ.ಮಂಥರ್ ಗೌಡ
- ಯಶವಂತಪುರ – ಬಾಲರಾಜ್ ಗೌಡ
- ಮಹಾಲಕ್ಷ್ಮಿ ಲೇಔಟ್ – ಕೇಶವಮೂರ್ತಿ
- ಪದ್ಮನಾಭನಗರ – ರಘುನಾಥ್ ನಾಯ್ಡು
- ಯಲಹಂಕ – ಕೇಶವ ರಾಜಣ್ಣ
- ಗೋಕಾಕ್- ಮಹಾಂತೇಶ್ ಕಡಾಡಿ
- ಕಿತ್ತೂರು- ಬಾಬಾಸಾಹೇಬ್ ಡಿ ಪಾಟೀಲ್
- ಸವದತ್ತಿ- ವಿಶ್ವಾಸ ವಸಂತ ವೈದ್ಯ
- ಮುಧೋಳ- ಆರ್ ಬಿ ತಿಮ್ಮಾಪುರ
- ಬೀಳಗಿ- ಜಿಟಿ ಪಾಟೀಲ್
- ಬಾದಾಮಿ- ಭೀಮಸೇನ ಚಿಮ್ಮನಕಟ್ಟಿ
- ಬಾಗಲಕೋಟೆ- ಹುಲ್ಲಪ್ಪ ಮೇಟಿ
- ಬಿಜಾಪುರ ನಗರ- ಅಬ್ದುಲ್ ಹಮೀದ್
- ನಾಗಾಠಾಣಾ- ವಿಠಲ್ ಕಟಕದೊಂಡ