ಹೊರಗಿನವರಿಗೆ ಪಕ್ಷದಲ್ಲೇ ವಿರೋಧ
ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊನೆಗೂ ಮಾಜಿ ಸಚಿವ ಸಂತೋಷ ಲಾಡ್ ಪಾಲಾಗುತ್ತಿದ್ದಂತೆಯೇ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಪಕ್ಷ ಬಿಡಲು ಮುಂದಾಗಿದ್ದು, ಬಿಜಿಪಿಯತ್ತ ಮುಖ ಮಾಡಿದ್ದಾರೆನ್ನಲಾಗುತ್ತಿದ್ದು, ಈಗಾಗಲೇ ಕ್ಷೇತ್ರದ ನೂರಾರು ಅವರ ಕಟ್ಟಾ ಅನುಯಾಯಿಗಳು ಬೆಂಗಳೂರಿನತ್ತ ತೆರಳಿದ್ದಾರೆ.
ಬೆಂಗಳೂರಿನಲ್ಲೇ ಇರುವ ಛಬ್ಬಿ ಇಂದು ಸಂಜೆ ವೇಳೆಗೆ ತಮ್ಮ ಹಿತೈಷಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು ಪಕ್ಷದಲ್ಲಿ ಇರುವುದಿಲ್ಲ ಮುಂದಿನ ನಡೆ ಇನ್ನೆರಡು ದಿನದಲ್ಲಿ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಛಬ್ಬಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಜತೆ ಮಾತನಾಡಿದ್ದಾರೆನ್ನಲಾಗಿದೆ.
ಕಳೆದ ಅನೇಕ ತಿಂಗಳುಗಳಿಂದ ಕಲಘಟಗಿ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಛಬ್ಬಿಯವರನ್ನು ಸೆಳೆಯಲು ಯತ್ನಿಸಿರುವುದಕ್ಕೆ ಕ್ಷೇತ್ರದ ೧೨ಕ್ಕೂ ಹೆಚ್ಚು ಕಮಲ ಟಿಕೆಟ್ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತ ಮಾಡುತ್ತಿದ್ದಾರೆ.
ಬಿಜೆಪಿ ಸಂಭಾವ್ಯರ ಪಟ್ಟಿ ದಿಲ್ಲಿಯಂಗಳ ತಲುಪಿದ್ದು ಎಲ್ಲ ಪರಿಶೀಲನೆ ನಂತರ ಛಬ್ಬಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ ಟಿಕೆಟ್ ನೀಡಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಬಿಜೆಪಿಗೆ ಸೇರ್ಪಡೆ ಸಾಧ್ಯತೆ 50:50 ಇದ್ದು ಆದರೆ ಈ ಬಾರಿ ರಾಜ್ಯ ಗೆಲ್ಲಲೇ ಬೇಕು ಏನಾದರೂ ಮಾಡಿ ಎಂಬ ಸ್ಪಷ್ಟ ಸಂದೇಶ ಇರುವ ಹಿನ್ನೆಲೆಯಲ್ಲಿ ಛಬ್ಬಿ ಸೇರ್ಪಡೆ ಮಾಡಿಕೊಂಡು ಟಿಕೆಟ್ ಕೊಟ್ಟರೂ ಅಚ್ಚರಿಯಿಲ್ಲ ಎಂದು ರಾಜ್ಯ ಮಟ್ಟದ ನಾಯಕರೊಬ್ಬರು ಹೇಳುತ್ತಾರೆ. ಛಬ್ಬಿ ಈಗಾಗಲೇ ಒಂದು ಸುತ್ತಿನ ಮಾತುಕತೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಪ್ರಮುಖರೊಂದಿಗೆ ನಡೆಸಿದ್ದು,ಆದರೆ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ.
ಟಿಕೆಟ್ ನಿರಾಕರಣೆ ನಂತರ ಛಬ್ಬಿ ’ನನ್ನ ನಿಷ್ಟೆಯನ್ನು ಪಕ್ಷ ಗಣನೆಗೆ ತೆಗೆದುಕೊಳ್ಳದೇ ಹೋಯಿತು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,ಬೆಂಬಲಿಗರೊಂದಿಗೆ ಪಕ್ಷದಿಂದ ಹೊರ ಹೋಗುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ತನ್ಮಧ್ಯೆ ಇಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಛಬ್ಬಿಯವರ ಜತೆ ಮಾತನಾಡಿ ದುಡುಕಿನ ನಿರ್ಧಾರ ಬೇಡ ಎಂದು ಹೇಳಿದ್ದಾರೆನ್ನಲಾಗಿದೆ.
ಈಗಾಗಲೇ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಹೊರಗಿನವರಿಗೆ ಮಣೆ ಹಾಕುವುದನ್ನು ವಿರೋಧಿಸಿದ್ದು, ಅಲ್ಲದೇ ಇಷ್ಟರಲ್ಲೇ ಎಲ್ಲ ಆಕಾಂಕ್ಷಿಗಳು ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಪೈಕಿ ಒಬ್ಬರಿಗೆ ನೀಡಿ ಎಂದು ಹೇಳುವ ಸಾಧ್ಯತೆಗಳಿವೆ.