ರಾಜಕೀಯ ನಿವೃತ್ತಿಗೆ ಸಿದ್ಧ: ಶೆಟ್ಟರ್
ಹುಬ್ಬಳ್ಳಿ: ಯಾವುದೇ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಹೊಂದುವುದಕ್ಕೆ ಸಿದ್ಧ. ಆದರೆ ಗೌರವಯುತವಾಗಿ ಹೊರ ಹೋಗಬೇಕು. ಈ ರೀತಿಯಾಗಿ ಹೋಗುವುದಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಪೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಕಾರಾತ್ಮಕ ಆಶಯ ಹೊಂದಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪನವರನ್ನು ಭೇಟಿಯಾಗಬೇಕಿತ್ತು. ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಲ್ಲದೇ ಕಳೆದ ಎರಡು ವರ್ಷದಿಂದ ಯಾವುದೇ ಸ್ಥಾನಮಾನ ಇಲ್ಲ. ಶಾಸಕನಾಗಿ ಕೆಲಸ ಮಾಡಿಕೊಂಡಿದ್ದೆ. ಸಕಾರಣ ವಿಲ್ಲದೇ ಟಿಕೆಟ್ ನಿರಾಕರಣೆ ಮಾಡಿದ್ದಾರೆ. ರಾಷ್ಡ್ರೀಯ ಅಧ್ಯಕ್ಷರೊಂದಿಗೆ ಮಾತ ನಾಡಿದ ಬಳಿಕ ಮುಂದೇನಾಗುತ್ತೊ ನೋಡೋಣ ಎಂದು ಹೇಳಿದರು.
ಯಾವುದೇ ಕಾರಣವಿಲ್ಲದೇ ನಾನು ನಿವೃತ್ತಿ ಘೋಷಣೆ ಮಾಡಲು ಸಿದ್ಧನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು ಎಂದರು.
ಛಬ್ಬಿಗೆ ಕಲಘಟಗಿ ಕಮಲ ಟಿಕೆಟ್
ಹುಬ್ಬಳ್ಳಿ : ಮೂರು ದಿನಗಳ ಹಿಂದಷ್ಟೆ ಬಿಜೆಪಿ ಬಾವುಟ ಹಿಡಿದಿರುವ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿಯವರಿಗೆ ಕಲಘಟಗಿ ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಖಚಿತ ಎನ್ನಲಾಗಿದೆ.
ಸ್ಥಳೀಯ ಆಕಾಂಕ್ಷಿಗಳ ತೀವ್ರ ವಿರೋಧದ ನಡುವೆಯೂ ಸಂತೋಷ ಲಾಡ್ ಸಮರ್ಥವಾಗಿ ಎದುರಿಸಲು ಛಬ್ಬಿಯೇ ಸಮರ್ಥ ಎಂಬ ಭಾವನೆ ಅನೇಕ ಮುಖಂಡರಲ್ಲಿದ್ದು ಅವರಿಗೆ ಟಿಕೆಟ್ ಭರವಸೆಯ ಮೇಲೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ರಾಮದುರ್ಗ ಕ್ಷೇತ್ರದಲ್ಲೂ ಇದೇ ರೀತಿ ಕಾಂಗ್ರೆಸ್‌ನ ಚಿಕ್ಕರೇವಣ್ಣ ಅವರಿಗೆ ಬಿಜೆಪಿ ಮಣೆ ಹಾಕಿರುವುದನ್ನು ಸ್ಮರಿಬಹುದು.
ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಸಹಿತ ಸುಮಾರು ಕಳೆದ ಅನೇಕ ದಿನಗಳಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿರುವ ಸುಮಾರು 12ಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ ಕೆಲವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಛಬ್ಬಿ ಅಂತಿಮಗೊಳಿಸಲು ಕೆಲ ಹಿರಿಯ ಮುಖಂಡರು ಚರ್ಚೆ ನಡೆಸಿರುವರೆನ್ನಲಾಗಿದೆ. ಅಥವಾ ಸ್ಥಳೀಯ ಆಕಾಂಕ್ಷಿಗಳ ಲ್ಲೊಬ್ಬರು ಬಂಡಾಯ ಅಭ್ಯರ್ಥಿಯನ್ನಾಗಿ ಘೋಷಿಸುವರೋ ಎಂಬುದು ಹೆಸರು ಪ್ರಕಟಗೊಂಡ ನಂತರವೇ ಅಂತಿಮಗೊಳ್ಳಲ್ಳಿದೆ.