ಧಾರವಾಡ ಅಭ್ಯರ್ಥಿಯಾಗಿ ಅಮೃತ ನಾಮಪತ್ರ
ಧಾರವಾಡ: ಧಾರವಾಡ -71 ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ಧಾಹಾಒ ಅಧ್ಯಕ್ಷ ಶಂಕರ ಮುಗದ, ನಾಗಪ್ಪ ಶೀಗಿಹಳ್ಳಿ, ಪತ್ನಿ ಪ್ರಿಯಾ ದೇಸಾಯಿ, ಆತ್ಮಾನಂದ ಅವರ ಸಹಿತ ಚುನಾವಣಾಧಿಕಾರಿ ಅಶೋಕ ತೇಲಿ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂದು ಸಾಂಕೇತಿಕ ವಾಗಿ ನಾಮಪತ್ರ ಸಲ್ಲಿಸಿದ್ದೆನೆ. ಏ.18ರಂದು ಪಕ್ಷದ ಬಿ ಫಾರ್ಮ್ ಮತ್ತು ಕಾರ್ಯ ಕರ್ತರ ಜೊತೆ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಟಿಕೆಟ್ ವಂಚಿತ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಅವರ ಮುನಿಸು ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ದೇಸಾಯಿ, ಅವರು ಸುದ್ದಿಗೋಷ್ಠಿಯಲ್ಲಿ ಮಾತ್ರ ಪಕ್ಷಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಅವರಿಗೆ ಆತುರದ ನಿರ್ಧಾರ ತೆಗೆಕೊಳ್ಳದಂತೆ ಹೇಳಿದ್ದೆನು. ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿಲ್ಲ. ಆದರೂ ಸಹ ಅವರು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಆದಾಗ್ಯೂ ಇನ್ನೂ ಸಹ ಅಷ್ಟಗಿಯವರ ಮನವೊಲಿಸುವ ಯತ್ನ ನಡೆದಿದೆ. ಅವರು ತಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಿದೆ ಎಂದರು. ಈ ಕುರಿತು ಪಕ್ಷದ ಹಿರಿಯರು ನಿರ್ಣಯ ಕೈಕೊಳ್ಳುವರು ಎಂದರು.
ಬಿಜೆಪಿ ವಿಶಾಲವಾದ ಪಕ್ಷ. ಇದು ಒಬ್ಬ ನಾಯಕನಿಂದ ನಡೆಯುವುದಿಲ್ಲ. ಅಷ್ಟಗಿ ಅವರು ಹಿರಿಯರಿದ್ದಾರೆ. ಪಕ್ಷದಲ್ಲಿಯೇ ಇರಬೇಕು. ಮುಂದೆ ಪಕ್ಷವು ಅವರಿಗೆ ಉನ್ನತ ಅವಕಾಶವನ್ನು ಕೊಡಬಹುದು. ಈ ಹಿಂದೆಯೂ ಅವರಿಗೆ ಅವಕಾಶ ಕೊಟ್ಟಿತ್ತು. ಹೀಗಾಗಿ ಅವರು ಪಕ್ಷದಲ್ಲಿ ಇರುವುದು ಒಳಿತು ಎಂದರು. ನಾಗಪ್ಪ ಗಾಣಿಗೇರ, ಮಹೇಶ ಯಲಿಗಾರ, ನಾಗನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.