ಹುಬ್ಬಳ್ಳಿ : ಬಿಜೆಪಿ ಬಾವುಟ ಹಿಡಿದು ವಾರ ಕಳೆಯುವುದರೊಳಗೆ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಕಲಘಟಗಿಯ ಟಿಕೆಟ್ ಗಿಟ್ಟಿಸಿಕೊಂಡಿದ್ದರೆ, ಆರು ಸಲ ಕೇಸರಿ ಬಾವುಟ ಹಾರಿಸಿ ಪಕ್ಷದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ, ಸಭಾಪತಿ, ಸಚಿವ ಅಲ್ಲದೇ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಜಗದೀಶ ಶೆಟ್ಟರ್ ಅವರು ಪ್ರತಿನಿಧಿಸುವ ಹು.ಧಾ.ಸೆಂಟ್ರಲ್ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ನಿನ್ನೆ ಬೆಳಿಗ್ಗೆ ವರಿಷ್ಠರ ಬುಲಾವ್ ಮೇರೆಗೆ ದಿಲ್ಲಿಗೆ ತೆರಳಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸ್ವತಃ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚಿಸಿದ್ದರೂ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಗೊಳ್ಳುವುದೆಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೇಸರಿ ಪಡೆಯ 6 ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿ ಪ್ರಕಟಗೊಂಡಿದ್ದರೂ 1993ರಿಂದ ಈಚೆಗೆ ಕಮಲ ಪಾಳೆಯದ ಭದ್ರಕೋಟೆಯಾದ ಸೆಂಟ್ರಲ್ ಕ್ಷೇತ್ರಕ್ಕೆ ಮಾತ್ರ ಮೂರನೆಯ ಪಟ್ಟಿಯಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಚುನಾವಣಾ ರಾಜಕಾರಣದಿಂದ ದೂರವುಳಿಯುವ ವರಿಷ್ಠರ ಸಲಹೆ ಸೋಲಿಲ್ಲದ ಸರದಾರ ಶೆಟ್ಟರ್‌ಗೆ ನುಂಗಲಾರದ ತುತ್ತಾಗಿದ್ದು, ಅವರಿಗೆ ಟಿಕೆಟ್ ನೀಡುವುದೋ ಅಥವಾ ಈಗಾಗಲೇ ಮೌಖಿಕವಾಗಿ ತಿಳಿಸಿದಂತೆ ಹೊಸಬರಿಗೆ ಮಣೆ ಹಾಕುವುದೋ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಶೆಟ್ಟರ್ ಬದಲಿಗೆ ಸೆಂಟ್ರಲ್ ಕ್ಷೇತ್ರಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 50 ಸಾವಿರಕ್ಕೂ ಹೆಚ್ಚು ಪಡೆದು ಈಗ ಬಿಜೆಪಿ ಪಾಳೆಯದಲ್ಲಿರುವ ಡಾ.ಮಹೇಶ ನಾಲವಾಡ ಮೂವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಸಂಘ ಪರಿವಾರದ ಹಿನ್ನೆಲೆಯ ಜಯತೀರ್ಥ ಕಟ್ಟಿ ಅವರ ಹೆಸರು ಅಂತಿಮ ಕ್ಷಣದಲ್ಲಿ ಸೇರ್ಪಡೆಯಾಗಿದೆ ಎನ್ನಲಾಗುತ್ತಿದೆ.
ಈ ಕ್ಷೇತ್ರದಲ್ಲಿ 17 ಪಾಲಿಕೆ ಸದಸ್ಯರು ಬಿಜೆಪಿ ಪ್ರತಿನಿಧಿಸುತ್ತಿದ್ದು (ಮೂವರು ಪಕ್ಷೇತರರು ಸೇರಿ) ಮೊದಲ ಬಾರಿ ಕ್ಷತ್ರೀಯ ಸಮಾಜದವರೂ ಇಲ್ಲಿನ ಟಿಕೆಟ್ ಹಿಂದುಳಿದವರಿಗೆ ನೀಡಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಇಂದು ರಾತ್ರಿ ಅಥವಾ ನಾಳೆ ಅಂತಿಮ ಪಟ್ಟಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.
ಏಕಾಂಗಿಯಾದ ಮಾಜಿ ಸಿಎಂ
ಶೆಟ್ಟರ್ ಅವರನ್ನು ಶಸ್ತ್ರ ತ್ಯಜಿಸುವಂತೆ ಮಾಡಲು ವ್ಯವಸ್ಥಿತ ಯತ್ನ ನಡೆದಿದೆಯೇ ಎಂಬುದು ಬಿಜೆಪಿ ಪಾಳೆಯದಿಂದಲೇ ಕೇಳಿ ಬರುತ್ತಿರುವ ಮಾತಾಗಿದ್ದು ಅಲ್ಲದೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶೆಟ್ಟರ್, ಈಶ್ವರಪ್ಪ ಸೇವೆ ಬೇರೆ ರಾಜ್ಯಗಳಿಗೆ ಬಳಸಿಕೊಳ್ಳಲಾಗುವುದು ಎನ್ನುವ ಮೂಲಕ ರಾಜ್ಯಪಾಲ ಹುದ್ದೆಯ ಮುನ್ಸೂಚನೆ ನೀಡಿದ್ದಾರೆನ್ನಲಾಗುತ್ತಿದೆ. ಒಂದು ವೇಳೆ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದಲ್ಲಿ ಬಂಡಾಯವೆದ್ದು ಸ್ವತಂತ್ರವಾಗಿ ಕಣಕ್ಕಿಳಿದು ಸೆಡ್ಡು ಹೊಡೆಯುವರೋ ಅಥವಾ ಪಕ್ಷ ಹೇಳಿದವರನ್ನು ಬೆಂಬಲಿಸುವರೋ ಎಂಬುದನ್ನು ಕಾದು ನೋಡಬೇಕಾಗಿದೆ.