ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ ಗ್ರಾಮೀಣ : ಬಿಜೆಪಿಗೆ ಅಷ್ಟಗಿ ಮಗ್ಗಲಮುಳ್ಳು!

ಧಾರವಾಡ ಗ್ರಾಮೀಣ : ಬಿಜೆಪಿಗೆ ಅಷ್ಟಗಿ ಮಗ್ಗಲಮುಳ್ಳು!

ಧಾರವಾಡ: ಧಾರವಾಡ -71 ಕ್ಷೇತ್ರಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಚುನಾವಣೆಯ ಗಾಳಿ ವೇಗ ಪಡೆದುಕೊಂಡಿದೆ.
ಬಿಜೆಪಿಯಿಂದ ಹಾಲಿ ಶಾಸಕ ಅಮೃತ ದೇಸಾಯಿ, ಕಾಂಗ್ರೆಸ್‌ನಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರುಗಳು ಅಧಿಕೃತಗೊಂಡಿವೆ. ಇನ್ನೂ ಜಾ.ದಳ, ಆಪ್ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಖೈರುಗೊಂಡಿಲ್ಲ.


ಈ ಮಧ್ಯೆ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದ ಇಸ್ಮಾಯಿಲ್ ತಮಟಗಾರ ನಡೆ ಇನ್ನೂ ನಿಗೂಢವಾಗಿದ್ದು, ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇತ್ತ ಬಿಜೆಪಿ ಟಿಕೆಟ್ ಬಯಸಿದ್ದ ತವನಪ್ಪ ಅಷ್ಟಗಿ ಈಗಾಗಲೇ ಬಿಜೆಪಿಗೆ ಗುಡ್ ಬೈ ಹೇಳಿದ್ದು ಪಕ್ಷೇತರರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಾಜಿ ಶಾಸಕಿ ಸೀಮಾ ಮಸೂತಿ ಮತ್ತು ಸವಿತಾ ಅಮರಶೆಟ್ಟಿ ಅವರು ಪಕ್ಷದ ತೀರ್ಮಾನ ಬೆಂಬಲಿಸುವ ಸಾಧ್ಯತೆ ದಟ್ಟವಾಗಿವೆ.


ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದ ಜನರ ಜೊತೆ ಒಡನಾಟ ಇಟ್ಟುಕೊಂಡಿರುವ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಕೂಡ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಉತ್ಸುಕತೆ ಹೊಂದಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಹೊರ ಬಿದ್ದಿರುವ ತವನಪ್ಪ ಅಷ್ಟಗಿಯವರು ಕಣಕ್ಕಿಳಿದರೆ ಬಸವರಾಜ ಕೊರವರ ಅವರು ಅಷ್ಟಗಿ ಬೆನ್ನಿಗೆ ನಿಲ್ಲುವುದು ನಿಶ್ಚಿತ.

ಇಂದು ಸಂಜೆ ತವನಪ್ಪ ಅಷ್ಟಗಿಯವರು ಸವದತ್ತಿ ರಸ್ತೆಯಲ್ಲಿನ ತಮ್ಮ ಮಾಲಿಕತ್ವದ ಶ್ರೀ ಪದ್ಮಾವತಿ ಕಾಟನ್ ಇಂಡಸ್ಟ್ರೀಯಲ್ಲಿ ಬೆಂಬಲಿಗರ ಮತ್ತು ಹಿತೈಷಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಮುಂದಿನ ನಡೆ ತೀರ್ಮಾನವಾಗಲಿದೆ. ಇನ್ನೊಂದೆಡೆ ಬಿಜೆಪಿಯಿಂದ ಹೊರ ನಡೆದಿರುವ ತವನಪ್ಪ ಅಷ್ಟಗಿ ಅವರ ಪರ ಹಾಗೂ ವಿರುದ್ಧ ಕೆಲವು ಪೋಸ್ಟ್‌ಗಳು ಹರಿದಾಡುತ್ತಿದ್ದು, ಚುನಾವಣೆ ಬಿಸಿಯ ತೀವ್ರತೆ ಹೆಚ್ಚಳಕ್ಕೆ ಕಾರಣವಾಗಿವೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲ ದಿನಗಳಿದ್ದು, ನಾಮಪತ್ರ ಸಲ್ಲಿಸಿದ ಬಳಿಕ ಇದೂ ಇನ್ನೂ ಹೆಚ್ಚುವ ಸಂಭವವಿದೆ.

administrator

Related Articles

Leave a Reply

Your email address will not be published. Required fields are marked *