ಹುಬ್ಬಳ್ಳಿ: ಬಿಜೆಪಿಯಲ್ಲಿ ಪರೋಕ್ಷವಾಗಿ ಹಾಗೂ ವ್ಯವಸ್ಥಿತವಾಗಿ ವೀರಶೈವ ಲಿಂಗಾಯತರನ್ನು ತುಳಿಯುವ ಕೆಲಸವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಶಿರಸಿಗೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರ ಬಳಿ ಸಮಯ ಕೇಳಿದ್ದೇನೆ ಮತ್ತು ಬೆಳಗ್ಗೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ಇಂದು ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರ ಜತೆ ಮಾತಾಡಿದ್ದೇನೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಕೊಡುತ್ತೇನೆ ಎಂದು ಶೆಟ್ಟರ್ ಹೇಳಿದರು.
ರಾಜೀನಾಮೆ ನೀಡಿ ವಾಪಸ್ ಬಂದು ಹಿತೈಷಿಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ. ಇಲ್ಲಿ ಯಾವುದೇ ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ ಮತ್ತು ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಪ್ರಧಾನಿ ಮೋದಿ ಹಾಗೂ ಅಮಿತ್ ಷಾಗೆ ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದರು.
ಕೆಲವರ ಹಿತಕ್ಕಾಗಿ ಬಿಜೆಪಿಯನ್ನು ಬಲಿಕೊಡುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡದೇ ಇರುವುದು ಬಿಜೆಪಿಗೆ ಮುಳುವಾಗುತ್ತದೆ. ನಾನು ಎಲ್ಲ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜತೆ ಮಾತಾಡುವ ಸೌಜನ್ಯವಿಲ್ಲ. ಟೇಕನ್ ಇಟ್ ಗ್ರ್ಯಾಂಟೆಡ್ ಅನ್ನೋ ಹಾಗೆ ಮಾತಾಡಿದ್ದಾರೆ ಎಂದು ಹೇಳಿದರು.