ಹುಬ್ಬಳ್ಳಿ: ಜಗದೀಶ ಶೆಟ್ಟರ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಾಳೆಯ ಸೇರಿದರೂ 12 ಅಭ್ಯರ್ಥಿಗಳ ಬಿಜೆಪಿಯ ಮೂರನೇ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಮಲ ಕಲಿ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ.
ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಬಾಕಿ ಉಳಿದಿದ್ದರೂ ಬಿಜೆಪಿ ಪಟ್ಟಿ ಇಂದು ರಾತ್ರಿ ವೇಳೆಗೆ ಬಿಡುಗಡೆಯಾಗಬಹುದೆಂಬ ಗುಸು ಗುಸು ದಟ್ಟವಾಗಿದೆ. ಶೆಟ್ಟರ್‌ಗೆ ಪರ್ಯಾಯವಾಗಿ ಅದೇ ಸಮುದಾಯದವರಿಗೆ ಮಣೆ ಹಾಕಬೇಕೋ ಅಥವಾ ಬೇರೆ ಸಮುದಾಯಕ್ಕೆ ಮಣೆ ಹಾಕಬೇಕೋ ಎಂಬುದು ಚರ್ಚೆಯಲ್ಲಿದ್ದು ಮೂವರ ಹೆಸರು ಮುಂಚೂಣಿಯಲ್ಲಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಡಾ.ಮಹೇಶ ನಾಲವಾಡ ಹೆಸರುಗಳು ಮುಂಚೂಣಿಯಲ್ಲಿದ್ದು, ಇಂದು ಬೆಳಿಗ್ಗೆಯಿಂದ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲರ ಚಾಲ್ತಿಗೆ ಬಂದಿದೆ. ಖಡಕ್ ವಾರ್ನಿಂಗ್ : ಶೆಟ್ಟರ್ ಸ್ವಾಗತಕ್ಕೆ ಯಾರೂ ಹೋಗಬಾರದೆಂದು ಮಹಾನಗರ ಬಿಜೆಪಿ ವತಿಯಿಂದ ಎಲ್ಲರಿಗೂ ಖಡಕ್ ಸಂದೇಶ ಹೋಗಿದೆಯೆಂದು ಹೇಳಲಾಗುತ್ತಿದೆ.