ಹುಬ್ಬಳ್ಳಿ-ಧಾರವಾಡ ಸುದ್ದಿ

ಇರಿದು ಯುವಕನ ಹತ್ಯೆ : ಏಳು ಜನ ವಶಕ್ಕೆ

ಜಾತ್ರೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ

ಧಾರವಾಡ: ಚಾಕುವಿನಿಂದ ಇರಿದು ಯುವಕನೋರ್ವನನ್ನು ಕೊಲೆಗೈದ ಘಟನೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗ್ರಾಮದ ಪ್ರವೀಣ ಸಿದ್ದಪ್ಪ ಕಮ್ಮಾರ (36) ಕೊಲೆಯಾದ ಯುವಕ. ಗ್ರಾಮ ಪಂಚಾಯತನ ಹಾಲಿ ಉಪಾಧ್ಯಕ್ಷನಾಗಿದ್ದ ಈತನು, ಗ್ರಾಮೀಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿ ತೊಡಗಿಸಿಕೊಂಡಿದ್ದನು.


ಗ್ರಾಮದಲ್ಲಿ ನಡೆಯುತ್ತಿದ್ದ ಉಡಚಮ್ಮನ ಜಾತ್ರೆ ವೇಳೆ ಕೊಲೆಯಾದ ಪ್ರವೀಣ ಕಮ್ಮಾರ ಮತ್ತು ಇತರರೊಂದಿಗೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಗ್ರಾಮದ ಕೆಲವರು ಸೇರಿ ಪ್ರವೀಣನನ್ನು ಚಾಕುವಿನಿಂದ ಇರಿದದ್ದು ಅಲ್ಲದೇ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಸಮೀಪದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗಿನ ಜಾವ 5.20 ರ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ರಾಘವೇಂದ್ರ ಬಸವರಾಜ ಪಟಾತ್, ಆತ್ಮಾನಂದ ಬಸವರಾಜ ಪಟಾತ್, ಮಹಾಂತೇಶ ಬಸವರಾಜ ಪಟಾತ್, ಯಲ್ಲಪ್ಪ ಕರೀಕಟ್ಟಿ, ಬಸವರಾಜ ಮಡಿವಾಳಪ್ಪ ಪಾಟೀಲ, ಶಂಕ್ರಯ್ಯ ಪಂಚಯ್ಯ ಮಠಪತಿ ಮತ್ತು ಗೀತಾ ಬಸವರಾಜ ಬಾರಕೇರ ಉರ್ಫ್ ಪೂಜಾರ ಎಂಬುವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಷ್ಪಕ್ಷಪಾತ ತನಿಖೆ : ಇಂದು ಬೆಳಗ್ಗೆ ಎಸ್‌ಡಿಎಂ ಆಸ್ಪತ್ರೆಗೆ ತಾವು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು, ಕೊಲೆಗೆ ಕಾರಣ ಏನು ಎಂದು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ರೀತಿಯ ಕಾರಣಗಳಿದ್ದರೂ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಚುನಾವಣೆ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ತರಹದ ಧಕ್ಕೆ ಆಗದಂತೆ ನಿಗಾವಹಿಸಲಾಗುವುದು. ಇಂದು ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಎಲ್ಲ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.

 

administrator

Related Articles

Leave a Reply

Your email address will not be published. Required fields are marked *