ಹುಬ್ಬಳ್ಳಿ: ಇಡೀ ರಾಜ್ಯದಲ್ಲೇ ಹೈ ವೋಲ್ಟೇಜ್ ಕಣವಾಗಿ ಮಾರ್ಪಟ್ಟಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕೇಸರಿ ಪಡೆ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರಸಲ್ಲಿಸಿದರು.
ನಿನ್ನೆ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದ್ದ ಟೆಂಗಿನಕಾಯಿ ನಗರದ ನಾಗಶೆಟ್ಟಿಕೊಪ್ಪದ ಮಾರುತಿ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸಿ ಆಗಮಿಸಿ ಪಾಲಿಕೆ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಪಕ್ಷಕ್ಕೆ, ನರೇಂದ್ರ ಮೋದಿ ಅವರಿಗೆ, ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರಿಗೆ ಜೈಕಾರ ಹಾಕಿದರು. ಮೆರವಣಿಗೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ರಾರಾಜಿಸಿದವು. ವಾದ್ಯ ಮೇಳ, ಬೊಂಬೆ ಕುಣಿತ ಕಣ್ಮನ ಸೆಳೆದವು.
ನಾಗಶೆಟ್ಟಿಕೊಪ್ಪದಿಂದ ಕೇಶ್ವಾಪೂರದ ಸರ್ವೋದಯ ಸರ್ಕಲ್ ಮೂಲಕ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮಹಾನಗರ ಪಾಲಿಕೆಯವರೆಗೂ ಮೆರವಣಿಗೆ ನಡೆಯಿತು.
ಮಹೇಶ ಟೆಂಗಿನಕಾಯಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಾ.ಮಹೇಶ ನಾಲವಾಡ, ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಭಯ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಸಂಜಯ ಕಪಟಕರ್, ಮೇನಕಾ ಹುರಳಿ, ಸಿದ್ದು ಮೊಗಲಿಶೆಟ್ಟರ್, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಅನೇಕ ಮಹಾನಗರ ಪಾಲಿಕೆ ಸದಸ್ಯರು ಇದ್ದರು.