ಜಾರಕಿಹೊಳಿ ಸಮ್ಮುಖದಲ್ಲಿ ಸೇರ್ಪಡೆ
ಧಾರವಾಡ: ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ತವನಪ್ಪ ಅಷ್ಟಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಗರದ ಸವದತ್ತಿ ರಸ್ತೆಯಲ್ಲಿರುವ ತವನಪ್ಪ ಅಷ್ಟಗಿ ಅವರ ಮನೆಗೆ ಇಂದು ಬೆಳಗ್ಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಮತ್ತಿತರರು ಇದ್ದರು. ಬೇಷರತ್ ಆಗಿ ಕಾಂಗ್ರೆಸ್ ಸೇರಿದ್ದು, ನಾಳೆ ನಾಮಪತ್ರ ಹಿಂಪಡೆಯುವುದಾಗಿ ಅಷ್ಟಗಿ ತಿಳಿಸಿದ್ದಾರೆ. ಧಾರವಾಡ-71 ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಯಸಿದ್ದ ಅಷ್ಟಗಿಯರಿಗೆ ಟಿಕೆಟ್ ಸಿಕ್ಕಿರಲಿಲ್ಲ.ಇದರಿಂದ ಅಸಮಾಧಾನಗೊಂಡಿದ್ದ ಅವರು ಮರು ದಿನವೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಕೂಡ ಸಲ್ಲಿಸಿದ್ದರು.ನಾಮಪತ್ರ ಹಿಂಪಡೆಯಲು ಇನ್ನೂ ಒಂದು ದಿನ ಬಾಕಿ ಇರುವಾಗಲೇ ಕೈಪಾಳಯ ಸೇರಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಒಂದು ಬಾರಿ ತವನಪ್ಪ ಅಷ್ಟಗಿ ಮತ್ತು ಅವರ ಪತ್ನಿ ಕಸ್ತೂರಿಯವರು ಜಿಲ್ಲಾ ಪಂಚಾಯತ ಸದಸ್ಯರಾಗಿದ್ದರು. ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಹೊಂದಿರುವ ಅಷ್ಟಗಿಯವರು ಇದೀಗ ಕಾಂಗ್ರೆಸ್ ಕೈ ಹಿಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಈ ಬೆಳವಣಿಗೆ ಬಿಜೆಪಿ ಪಾಲಿಗೆ ತುಸು ಸಮಸ್ಯೆ ಒಡ್ಡಲಿದೆ ಎಂಬ ಮಾತು ಕೇಳಿ ಬರುತ್ತಿವೆ.