ಹುಬ್ಬಳ್ಳಿ-ಧಾರವಾಡ ಸುದ್ದಿ

ವಿನಯ ಕೈ ಹಿಡಿದ ಧಾರವಾಡ ಗ್ರಾಮೀಣ

ಕ್ಷೇತ್ರಕ್ಕೆ ಬಾರದೇ ಗೆಲುವು ಸಾಧಿಸಿದರು

ಧಾರವಾಡ : ಭಾರೀ ಪೈಪೋಟಿಯಿಂದ ಕೂಡಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕ್ಷೇತ್ರಕ್ಕೆ ಕಾಲಿಡದ ಮಾಜಿ ಸಚಿವ ವಿನಯ ಕುಲಕರ್ಣಿ ಭರ್ಜರಿ ಗೆಲುವು ಸಾಧಿಸಿದ್ದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ ಅವರ ಪತ್ನಿ ಶಿವಲೀಲಾ ಹಾಗೂ ಬೆಂಬಲಿಗರ ಸಂಘಟಿತ ಯತ್ನ ಫಲ ಕೊಟ್ಟಿದೆ.


ವಿನಯ ಕುಲಕರ್ಣಿಯವರಿಗೆ 74875 ಮತಗಳನ್ನು ಪಡೆದರೆ, ಅಮೃತ ದೇಸಾಯಿಗೆ 58255 ಮತ ಬಂದಿದ್ದು, 16620 ಮತಗಳ ದೊಡ್ಡ ಜಯ ಸಿಕ್ಕಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕೃಪಾಕಟಾಕ್ಷದಿಂದ ಮತ್ತೆ ಟಿಕೆಟ್ ಗಿಟ್ಟಿಸಿದ್ದ 2018ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಅಮೃತ ದೇಸಾಯಿ ಪರಾಭವಗೊಂಡಿದ್ದಾರೆ.


ಅಂಚೆ ಮತದಿಂದ ಆರಂಭವಾದ ವಿನಯ ಕುಲಕರ್ಣಿಯವರ ಮುನ್ನಡೆ ಪ್ರತಿ ಸುತ್ತಿನಲ್ಲೂ ಹೆಚ್ಚಾಗುತ್ತಲೆ ಹೋಗಿ ಅಂತಿಮವಾಗಿ ಗೆಲುವಿನ ನಗೆ ಬೀರಿದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಕಾಲಿಡಲೂ ಆಗದೆ ಪಕ್ಕದ ಕಿತ್ತೂರ, ಸವದತ್ತಿಗಳಿಂದಲೇ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಅದೇ ಅನುಕಂಪದ ಅಲೆ ಅವರನ್ನು ದಡ ಸೇರಿಸಿದೆ. ಮತದಾನಕ್ಕೆ ಕೆಲ ದಿನಗಳ ಮೊದಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಸಹ ವಿನಯ ಬೆಂಬಲಿಸಿ ಕೈ ಪಾಳೆಯ ಸೇರಿದ್ದು ಪ್ಲಸ್ ಆಗಿ ಪರಿಣಮಿಸಿತ್ತು.


ಈ ಹಿಂದಿನ ಚುನಾವಣೆಯಲ್ಲಿ ಅಮೃತ ಜೊತೆಗಿದ್ದವರು ಕೈ ಕೊಟ್ಟಿದ್ದರೂ ಸಂಘ ಪರಿವಾರ ಮತ್ತು ಪ್ರಲ್ಹಾದ ಜೋಶಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಪ್ರಲ್ಹಾದ ಜೋಶಿ ಕೊನೆಯ ಕ್ಷಣದಲ್ಲಿ ನಡೆಸಿದ ಮುನಿಸಿಕೊಂಡವರ ಮನ ಒಲಿಸಲು ಮುಂದಾದರೂ ಯಶಸ್ವಿಯಾಗಲಿಲ್ಲ.

administrator

Related Articles

Leave a Reply

Your email address will not be published. Required fields are marked *