ದುಬೈನಲ್ಲಿ ನಡೆದ ‘ಮಿಸೆಸ್ ಇಂಡಿಯಾ ಕ್ವೀನ್-2023-2024
ಎರಡು ಕಿರೀಟ ಮುಡಿಗೇರಿಸಿದ ತೇಜಸ್ವಿನಿ
ಬಾಗಲಕೋಟೆ: ಎಸ್.ಆರ್. ಕ್ವೀನ್ಸ್ ಮೀಡಿಯಾ ಸಂಸ್ಥೆ ದುಬೈನಲ್ಲಿ ಆಯೋಜಿಸಿದ್ದ ‘ಮಿಸೆಸ್ ಇಂಡಿಯಾ ಕ್ವೀನ್-2023-2024 ಪೆಹಚಾನ್ ಮೇರಿ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಾಗಲಕೊಟೆಯ ತೇಜಸ್ವಿನಿ ಹಿರೇಮಠ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಒಂದೇ ಸ್ಪರ್ಧೆಯಲ್ಲಿ ಎರಡು ಕಿರೀಟ ಮುಡಿಗೇರಿಸುವ ಮೂಲಕ ತಮ್ಮದೇ ಆದ ಛಾಪನ್ನು ತೇಜಸ್ವಿನಿ ಮೂಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಮಿಸೆಸ್ ಕರ್ನಾಟಕ ಹಾಗೂ ಮಿಸೆಸ್ ಗಾಡೆಸ್ ಅಂಬಾಸೆಡರ್ ಎಂಬ ಟೈಟಲ್ಗಳನ್ನು ಮುಡಿಗೇರಿಸಿರುವ ತೇಜಸ್ವಿನಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಎಸ್ಆರ್ ಕ್ವೀನ್ ಮೀಡಿಯಾ ಸಂಸ್ಥೆಯು ಮಿಸೆಸ್ ಇಂಡಿಯಾ ಇಂಟರ್ನಾಷನಲ್ ಬ್ಯುಟಿ ಪೇಜೆಂಟ್ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಭಾರತೀಯ ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ತಾಯಿ, ಹೆಂಡತಿ, ಗೃಹಿಣಿ, ಕೆಲಸ ಮಾಡುತ್ತಿರುವ ಮಹಿಳೆ ಹೀಗೆ ಯಾರೇ ಇದ್ದರೂ, ಅವರಿಗೆ ವೇದಿಕೆ ಕಲ್ಪಿಸುವುದು ಈ ಸ್ಪರ್ಧೆಯ ಉದ್ದೇಶ.
ಮಹಿಳೆಯರು ಸಮಾಜ ಹಾಗೂ ಜಗತ್ತಿನಲ್ಲಿ ತಮ್ಮದೇ ಆದ ಸಾಧನೆಯ ಛಾಪು ಒತ್ತಲು ಈ ವೇದಿಕೆ ಅವಕಾಶ ಕಲ್ಪಿಸುತ್ತಿದೆ. ವಿನ್ಯಾಸಗಾರರು, ತರಬೇತುದಾರರು, ವೃತ್ತಿಪರರು ಸೇರಿದಂತೆ ಫ್ಯಾಷನ್ ಜಗತ್ತಿನ ವಿವಿಧ ಆಯಾಮಗಳು ದಿಗ್ಗಜರು ಪಾಲ್ಗೊಳ್ಳುವ ಈ ಸ್ಪರ್ಧೆಯಲ್ಲಿ ಮಹಿಳೆಯರ ಪರಿಪೂರ್ಣ ವ್ಯಕ್ತಿತ್ವವನ್ನು ಅಳತೆಗೋಲಾಗಿಸಿ, ವಿಜೇತರನ್ನು ಆಯ್ಕೆ ಮಾಡುವುದು ವಿಶೇಷ.
ಇದರ ಜೊತೆಗೆ ಆಯ್ಕೆಯಾಗುವ ಮಹಿಳೆಯರಿಗೆ ಅಗತ್ಯ ಸಹಕಾರ, ಪ್ರೋತ್ಸಾಹ ನೀಡುವ ಅವರ ಯಶಸ್ಸಿನ ಪಯಣದಲ್ಲಿ ಜೊತೆಯಾಗಲು ಎಸ್.ಆರ್. ಕ್ವೀನ್ ಮೀಡಿಯಾ ಸಂಸ್ಥೆ ಶ್ರಮಿಸುತ್ತಿದೆ.
ಸುಮಾರು 23ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ತೇಜಸ್ವಿನಿ ಅವರು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದ ಮೂಲಕ ತೀರ್ಪುಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಡಾ.ವರುಣ್ ಕುಟಿಯಾಲ್, ಶ್ವೇತಾ ರಾಯ್, ಪೂಜಾ ಪರಮೇಶ್ವರ ಅವರಂತಹ ದಿಗ್ಗಜರು ತೀರ್ಪುಗಾರರಾಗಿದ್ದ ಈ ಸ್ಪರ್ಧೆಯಲ್ಲಿ ಗೆಲುವು ಸುಲಭದ್ದಾಗಿರಲಿಲ್ಲ. ಅದಾಗ್ಯೂ ತೇಜಸ್ವಿನಿ ಅವರು ಎರಡು ಕಿರೀಟಿಗಳನ್ನು ಮುಡಿಗೆ ಏರಿಸಿಕೊಂಡಿದ್ದಾರೆ.
ಸ್ಪರ್ಧೆಯ ಕುರಿತು ಮಾತನಾಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಎಲ್ಲ ಸೌಂದರ್ಯ ಸ್ಪರ್ಧೆಗಳಲ್ಲಿ ದೇಹದ ವಿನ್ಯಾಸ, ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಈ ಸ್ಪರ್ಧೆಯಲ್ಲಿ ಮಹಿಳೆಯ ವ್ಯಕ್ತಿತ್ವಕ್ಕೆ ಪ್ರಾಧಾನ್ಯತೆ ನೀಡುವುದು ಗಮನ ಸೆಳೆಯುತ್ತದೆ. ಮಹಿಳೆಯರೂ ಆತ್ಮವಿಶ್ವಾಸದಿಂದ ಪಾಲ್ಗೊಂಡಿದ್ದು, ಅವರಿಗೆ ಅವರ ಪತಿ ಕೂಡ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದ್ದಾರೆ.