ಕರುನಾಡಿಗೆ ಜೋಡೆತ್ತಿನ ಸರಕಾರ
ಭಾಗ್ಯಗಳ ಸರದಾರ ಸಿದ್ದು ಮತ್ತೆ ಸಿಎಂ ಟ್ರಬಲ್ ಶೂಟರ್ ಡಿಕೆಶಿ ಡಿಸಿಎಂ
ನಾಡಿದ್ದು ಪ್ರಮಾಣ – ದಿಲ್ಲಿಯಿಂದಲೇ ಒಗ್ಗಟ್ಟು ಪ್ರದರ್ಶನ ಸಂದೇಶ
ಮೊದಲ ಹಂತದಲ್ಲಿ 10ರಿಂದ 15ಜನರ ಪ್ರಮಾಣ
ಹೊಸದಿಲ್ಲಿ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 13ರಂದು ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಗಳಿಸಿ ಬಹುಮತ ಗಳಿಸಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ರಾಷ್ಟ್ರರಾಜಧಾನಿಯಲ್ಲಿ ಮುಖ್ಯಮಂತ್ರಿ ಹುದ್ದೆ ಆಯ್ಕೆಗಾಗಿ ಬಹಳಷ್ಟು ಹೈಡ್ರಾಮಾ ನಡೆದಿದ್ದು, ಕೊನೆಗೂ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ಸು ಕಂಡಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿದ್ದರಾಮಯ್ಯ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇಂದು ಹೊಸದಿಲ್ಲಿಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಮೇ 29ರಂದು 12.30ಕ್ಕೆ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.
ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಮಾತ್ರ ಡಿಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಭಾರತ್ ಜೋಡೋ ಯಾತ್ರೆ ತುಂಬಾ ಸಹಕಾರಿಯಾಗಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಶ್ರಮವೂ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅವಿರತ ಪ್ರಚಾರ ಕಾರ್ಯವನ್ನು ಅಭಿನಂದಿಸಲೇಬೇಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದಾರೆ. ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ಡೈನಾಮಿಕ್ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕತ್ವವಿದೆ ಎಂದರು.
ರಾಜ್ಯದ ನೂತನ ಸಿಎಂ, ಡಿಸಿಎಂ ಪ್ರಮಾಣವಚನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಸಕಲ ಸಿದ್ದತೆ ಆರಂಭವಾಗಿದೆ.
ಸಿಎಂ ಆಯ್ಕೆ ವಿಚಾರ ಕೊನೆಗೂ ಅಂತಿಮವಾಗಿದ್ದು, ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಡಿಕೆ ಶಿವಕುಮಾರ್ ಮಾತುಕತೆ ಅಂತ್ಯಗೊಂಡ ಬಳಿಕ ಎಲ್ಲವೂ ಅಂತಿಮವಾಗಿದ್ದು, ಮೊದಲ 30 ತಿಂಗಳು ಸಿದ್ದರಾಮಯ್ಯ ಅವರು ನಂತರದ 30 ತಿಂಗಳು ಡಿಕೆ ಶಿವಕುಮಾರ್ ಅವರು ಅಧಿಕಾರವನ್ನು ಹಂಚಿಕೊಳ್ಳಲಿದ್ದಾರೆ ಅಂತ ತಿಳಿದು ಬಂದಿದೆ.
ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ಡಿಕೆಶಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದು, ಹೈಕಮಾಂಡ್ ಸೂಚನೆಗೆ ಡಿಕೆಶಿ ಒಪ್ಪಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ೭ ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.
ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅಧಿಕೃತ ವಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಖರ್ಗೆ ಒಂದು ಮಾಡಿ ದ್ದಾರೆ. ಖರ್ಗೆ ನಿವಾಸದಲ್ಲಿ ಮೂವರೂ ನಾಯಕರು ಕೈ ಎತ್ತಿರುವ ಫೋಟೋ ಬಿಡುಗಡೆಯಾಗಿದ್ದು, ಇದು ವೈರಲ್ ಆಗಿದೆ.
ಮೊದಲ ಹಂತದಲ್ಲಿ 10ರಿಂದ 15 ಜನರ ಪ್ರಮಾಣ
ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ನಡೆಯುವ ಮೊದಲೇ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದ್ದು, ಆದರೆ ನಿಧಾನವಾದರೂ ಪರವಾಗಿಲ್ಲ ಎರಡು ಹಂತದಲ್ಲಿ ಸಂಪುಟ ರಚನೆ ಮಾಡಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.
ಇಂದು ಶಾಸಕಾಂಗ ಪಕ್ಷದ ಸಭೆ ಬಳಿಕ ಸಿದ್ದರಾಮಯ್ಯ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಸಚಿವ ಸಂಪುಟ ರಚನೆ ಬಗ್ಗೆ ನಾಳೆ ದೆಹಲಿಯಲ್ಲಿ ಪಟ್ಟಿ ಫೈನಲ್ ಆಗಬಹುದಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು ಅವರೊಂದಿಗೆ 20 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆ 20 ಜನರ ಪಟ್ಟಿ ನಾಳೆ ದೆಹಲಿಯಲ್ಲಿ ಫೈನಲ್ ಆಗಲಿದೆ. ಮೊದಲ ಹಂತದಲ್ಲಿ 10 ರಿಂದ 15 ಅಥವಾ 20 ಸಚಿವರ ಪ್ರಮಾಣ ವಚನ ನಡೆಯಲಿದ್ದು ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ಸಚಿವ ಸ್ಥಾನ ಭರ್ತಿಗೆ ಚಿಂತನೆ ನಡೆಸಲಾಗಿದೆ.
ಲಿಂಗಾಯತರಿಗೆ 7, ಒಕ್ಕಲಿಗರಿಗೆ 6, ಮುಸ್ಲಿಂ 4, ಎಸ್ಟಿ 3, ಎಸ್ಸಿ(ಬಲ) 3, ಎಸ್ಸಿ(ಎಡ) 2, ಬ್ರಾಹ್ಮಣ 1, ಈಡಿಗ 1, ರೆಡ್ಡಿ 2, ಕುರುಬ 2 ಹಾಗೂ ಕ್ರಿಶ್ಚಿಯನ್ ಒಬ್ಬರಿಗೆ ಮಣೆ ಹಾಕಲು ವರಿಷ್ಠರು ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.