ಪ್ರೂಟ್ ಅರ್ಬಾಜ್ ತಂಡದಿಂದ ದುಷ್ಕೃತ್ಯ – ಮೂರು ಮಾರಕಾಸ್ತ್ರ ವಶಕ್ಕೆ
ಧಾರವಾಡ : ಇಲ್ಲಿಯ ಯಾದವಾಡ ರಸ್ತೆಯಲ್ಲಿನ ಕಮಲಾಪುರದಲ್ಲಿ ಗುರುವಾರ ತಡರಾತ್ರಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಮಹ್ಮದ ರಹೀಮಖಾನ ಕುಡಚಿ ಹಾಗೂ ಆತನ ಸಹಚರ ಗಣೇಶ ಸಾಳುಂಕೆ ಎಂಬಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಲ್ಯಾಂಡ್ ಡೀಲಿಂಗ್ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಪ್ರೂಟ್ ಇರ್ಪಾನ್ನ ಮಗ ಅರ್ಬಾಜ್ ಹಂಚಿನಾಳ ಹಾಗೂ ಐವರ ತಂಡ ಮಾರಕಾಸ್ತ್ರ ಮತ್ತು ರಿವಾಲ್ವರ್ನಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದೆ. ಮಾನಸಗಂಗಾ ಶಾಲೆಯ ಬಳಿಯಲ್ಲಿ ತಮ್ಮ ಮನೆ ಎದುರು ಮಹ್ಮದ ಕುಡಚಿ( 47) ರಾತ್ರಿ 11ರ ಸುಮಾರಿಗೆ ಕುಳಿತಿದ್ದಾಗ ಅರ್ಬಾಜ್ ಹಾಗೂ ಐವರ ತಂಡ ಏಕಾಏಕಿ ದಾಳಿ ನಡೆಸಿತಲ್ಲದೇ ಒಂದೆ ಸಮನೆ ಗುಂಡು ಹಾರಿಸಿದ್ದಲ್ಲದೇ ಮಾರಕಾಸ್ತ್ರಗಳಿಂದ ಕೊಚ್ಚಿ ಮನ ಬಂದಂತೆ ಇರಿದು ಕೊಲೆ ಮಾಡಿದೆ.
ಮೂಲತಃ ಮುಂಡಗೋಡದವನಾದ ಇಲ್ಲಿನ ಗಣೇಶ ನಗರ ನಿವಾಸಿ ಕುಡಚಿಯ ಸಹಚರನಾಗಿದ್ದ ಗಣೇಶ ಸಾಳುಂಕೆ( 23) ಪರಾರಿಯಾಗಲು ಮುಂದಾದಾಗ ದುಷ್ಕರ್ಮಿಗಳು ಆತನ ಆತನ ಬೆನ್ನು ಬಿದ್ದು ಸಾಯಿಸಿದ್ದಾರೆ.
ಪ್ರೂಟ್ ಇರ್ಫಾನ್ನ ಹತ್ಯೆಯಾಗುವ ಮೊದಲು ಕುಡಚಿ ಆತನ ನಿಕಟವರ್ತಿಯಾಗಿದ್ದ. ಇರ್ಪಾನನ ಹಣಕಾಸು ಅಲ್ಲದೇ ಕೆಲ ಬೇನಾಮಿ ಆಸ್ತಿ ಕುಡಚಿ ಬಳಿ ಇತ್ತೆನ್ನಲಾಗಿದೆ. ತಂದೆಯ ಹತ್ಯೆಯ ನಂತರ ಅರ್ಬಾಜ್ ಹಂಚಿನಾಳ ಈ ಬಗ್ಗೆ ಪ್ರಶ್ನಿಸಿದಾಗ ಜಗಳ, ಮಾತಿನ ಚಕಮಕಿಯೂ ನಡೆದಿತ್ತು.
ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಭೇಟಿ ನೀಡಿದ್ದು ಎರಡೂ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸಿ, ವಾಸ್ತವ ಏನೆಂಬುದನ್ನು ಬಹಿರಂಗ ಪಡಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಘಟನೆ ಬಗ್ಗೆ ವೈಜ್ಞಾನಿಕವಾಗಿ ನಾವು ತನಿಖೆ ನಡೆಸಿದ್ದೇವೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಾರಕಾಸ್ತ್ರಗಳು ನಮಗೆ ದೊರೆತಿದ್ದು ಇಷ್ಟರಲ್ಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಂದು ಗುಪ್ತಾ ಹೇಳಿದರು.
ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿದ್ದು, ಉಪನಗರ ಠಾಣೆ ಪೊಲೀಸರು ಅರ್ಬಾಜ್ ಹಾಗೂ ಅವರ ಐವರು ಸಹಚರರ ಮಾಹಿತಿ ಕಲೆ ಹಾಕುತ್ತಿದ್ದು ಇಷ್ಟರಲ್ಲೇ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.