ಸಿಆರ್ಪಿಸಿ ಕಲಂ 371ರಡಿ ಅವಕಾಶ : ಸಾಂಡ್ರಾ
ಯೋಗಿ ಸರ್ಕಾರವೂ ಮಾಡಿದೆ ಇಂತಹ ಆದೇಶ
ಹುಬ್ಬಳ್ಳಿ : ಧಾರ್ಮಿಕ ಸಾಮರಸ್ಯಕ್ಕಾಗಿ, ಸಾಮಾಜಿಕ ಶಾಂತಿ-ಸೌಹಾರ್ದತೆಗಾಗಿ, ಕಾನೂನು ಸುವ್ಯವಸ್ಥೆ ಪರಿಪಾಲನೆಗಾಗಿ, ಅದರಲ್ಲೂ ವಿಶೇಷವಾಗಿ ಸಂವಿಧಾನದ ಮೂಲಭೂತ ಹಕ್ಕುಗಳ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿತರಾಗಿರುವ 156 ಜನರ ವಿರುದ್ಧದ ಪ್ರಕರಣವನ್ನು ಸರ್ಕಾರ ಹಿಂಪಡೆಯಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ ಸುನೀಲ ಸಾಂಡ್ರಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಯಲ್ಲಿ ದಿನಾಂಕ : 16-04-2022 ರಂದು 156 ಜನರ ಮೇಲಿರುವ ಸ್ಪೇಶಲ್ ಸಿ.ನಂ.2263/22 ರ ಪ್ರಕರಣ ಹಿಂಪಡೆಯಲು ಸಿ.ಆರ್.ಪಿ.ಸಿ. ಕಲಂ 371 ರ ಅಡಿಯಲ್ಲಿ ಆವಕಾಶವಿದ್ದು, ಆದ್ದರಿಂದ ಈ ಪ್ರಕರಣದ ಕುರಿತು ಗಂಭೀರ ಗಮನ ನೀಡಿ, 156 ಜನರ ಮೇಲಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲರಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಇಂಥ ಪ್ರಕರಣಗಳಲ್ಲಿ 321ರ ಅಡಿ ಆರೋಪಿತರನ್ನು ಬಿಡುಗಡೆ ಗೊಳಿಸಿದಂತಹ ಸಾಕಷ್ಟು ಉದಾಹರಣೆಗಳಿವೆ. ಉತ್ತರ ಪ್ರದೇಶದ ಮುಜಪ್ಪುರ ನಗರದಲ್ಲಿ 2013ರಲ್ಲಿ ನಡೆದ ಪ್ರಕರಣದಲ್ಲಿ 60 ಜನ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದು ಹಾಗೂ 50 ಸಾವಿರ ಜನ ಸ್ಥಳಾಂತರಗೊಂಡಿದ್ದರು. ಸದರ ಪ್ರಕರಣದಲ್ಲಿ ಮಾಜಿ ಕೇಂದ್ರ ಮಂತ್ರಿ ಸಂದೀಪ ಬಾಲಿಯನ, ವಿ.ಎಚ್.ಪಿ. ಯ ಧುರೀಣಿ ಸಾದ್ವಿ ಪ್ರಾಚಿ, ಬಿ.ಜೆ.ಪಿ. ಯ ಶಾಸಕ ಉಮೇಶ ಮಲ್ಲಿಕ, ಸಂಗೀತ ಸೋಮ ಹಾಗೂ ಬಿ.ಜೆ.ಪಿ,ಯ ಸಂಸದರಾದ ಸುರೇಶ ರಾಣಾ ಹಾಗೂ ಬರ್ತೇಂದ್ರ ಸಿಂಗ್ ಇವರೆಲ್ಲ ಈ ಪ್ರಕರಣದಲ್ಲಿ ಆರೋಪಿತರಾಗಿದ್ದು, ದಳ್ಳುರಿ ಪ್ರಕರಣದ ಹಿನ್ನೆಲೆಯಲ್ಲಿ ಮುಜಪ್ಪುರನಗರ ಹಾಗೂ ಶಾಮಿಲಿ ನಗರದಲ್ಲಿ 1450 ಜನರ ಮೇಲೆ 500 ವಿವಿಧ ಪ್ರಕರಣಗಳನ್ನು ಪೋಲಿಸರು ದಾಖಲಿಸಿದ್ದರು. ಈ ಪ್ರಕರಣದಲ್ಲಿ 131 ಪ್ರಕರಣಗಳನ್ನು ಹಿಂಪಡೆಯಲು ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ ಆದೇಶ ನೀಡಿದ್ದು ಇದೆ ಎಂದು ಅವರು ವಿವರ ನೀಡಿದರು.
ಹಿಂದೂ-ಮುಸ್ಲಿಂ ತಾರತಮ್ಯದ ವಿಷಬೀಜವನ್ನು ಬಿತ್ತುವ ಯತ್ನವಾಗಿ ಹಳೇಹುಬ್ಬಳ್ಳಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಏಷ್ಟು ಅಸತ್ಯದಿಂದ ಕೂಡಿದೆ’ ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಿಸಿರುವ ದೇಶದ್ರೋಹದ ಕಲು ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ 155ಜನರಲ್ಲಿ 8 ಜನ ಮಾತ್ರ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. 148 ಜನ, ಜೈಲಿನ ಮೇಲೆ ಜೈಲಿನಿಂದ ಹೊರಬರದಿರಲು ಪೋಲಿಸರು ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ದೇಶದ್ರೋಹದ ಕಲು ಕಾರಣವಾಗಿದೆ. 14 ತಿಂಗಳಿನಿಂದ 148 ಜನ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ದೇಶದ್ರೋಹದ ಕಲಂ ಆಡಿ 148 ಜನರ ಕುಟುಂಬಗಳು, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತುಂಬಲಾರದ ನಷ್ಟಕ್ಕೆ ಒಳಗಾಗಿದ್ದಾರೆಂದರು.
ದೇಶ ದ್ರೋಹದ ಕಾನೂನಿನ ಹೆಸರಿನಲ್ಲಿ ದುರುಪಯೋಗವಾಗುತ್ತಿರುದನ್ನು ತಡೆಯಲು ಕಾನೂನಿನ ತಿದ್ದುಪಡಿ ಮಾಡುವದು ದೇಶದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ ಎಂದು ಸಾಂಡ್ರಾ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಇದ್ದರು.