ಹುಬ್ಬಳ್ಳಿ-ಧಾರವಾಡ ಸುದ್ದಿ

ಭಾರತ 2047 ಕ್ಕೆ ಬಲಿಷ್ಠ ಅರ್ಥ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಲಿದೆ: ಭಗವಂತ ಖೂಬಾ

6ನೇ ರಾಷ್ಟ್ರೀಯ ರೋಜಗಾರ್ ಮೇಳಕ್ಕೆ ಚಾಲನೆ 

ದೇಶದಾದ್ಯಂತ 70,126 ಹೊಸ ಉದ್ಯೋಗದಾತರಿಗೆ ನೇಮಕಾತಿ ಪತ್ರ ವಿತರಣೆ

ಹುಬ್ಬಳ್ಳಿ: ದೇಶದ ಜನರ ಸರ್ವಾಂಗೀಣ ಏಳಿಗೆಗೆ ಸರ್ಕಾರದ ಯೋಜನೆಗಳು ಸಹಾಯಕವಾಗಿವೆ. ಭಾರತವು 2030 ಕ್ಕೆ 3 ನೇ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ. ಅಲ್ಲದೇ 2047 ಕ್ಕೆ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಯುವ ಜನರಿಗೆ ಉದ್ಯೋಗ ನೀಡುವ ಮೂಲಕ ಯುವಕರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ಹೇಳಿದರು.

ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ರೈಲ್ವೆ ಇಲಾಖೆ, ಅಂಚೆ ಇಲಾಖೆ, ಕೆನರಾ ಬ್ಯಾಂಕ್, ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳ ವಿತರಣೆಯ ರೋಜಗಾರ್ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಬಂದು 9 ವರ್ಷಗಳು ಗತಿಸಿವೆ. 9 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿ, ಯುವಕರಿಗೆ ಅವಕಾಶ, ಮಹಿಳಾ ಕೇಂದ್ರಿಕೃತ ಕಾರ್ಯಕ್ರಮಗಳು, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವಲಯಗಳ ಜನರಿಗೆ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರ ಬದುಕನ್ನು ಸುಗಮಗೊಳಿಸಿವೆ.

ಮುದ್ರಾ ಯೋಜನೆಯಡಿಯಲ್ಲಿ ವ್ಯಾಪಾರಸ್ಥರು ಸಾಲ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾ, ಸ್ಕೀಲ್ ಇಂಡಿಯಾ, ಮೇಕ್ ಇನ್‌ ಇಂಡಿಯಾ, ಜಲಜೀವನ್ ಮಿಷನ್ ಸೇರಿದಂತೆ ಸಾಕಷ್ಟು ಯೋಜನೆಗಳ ಲಾಭವನ್ನು ಸಾರ್ವಜನಿಕರು ಪಡೆದುಕೊಂಡಿರುತ್ತಾರೆ. ಕಳೆದ 9 ವರ್ಷಗಳಲ್ಲಿ ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯ ಮಾಡಲಾಗಿದೆ ಎಂದು ತಿಳಿಸಿದರು.

ಭಾರತ ಇಂದು ವಿಶ್ವದ 10 ದೊಡ್ಡ ಅರ್ಥ ವ್ಯವಸ್ಥೆ ಹೊಂದಿದ ರಾಷ್ಟ್ರಗಳಲ್ಲಿ 5 ನೇ ಸ್ಥಾನದಲ್ಲಿದೆ. ಭಾರತವು 2030 ಕ್ಕೆ 3 ನೇ ಅರ್ಥಿಕತೆ ಹೊಂದಲಿದ್ದು, 3.3 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದೆ. ನೆರೆ ದೇಶಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಉತ್ತಮವಾಗಿದೆ ಎಂದರು.

ಯಾವುದೇ ಮಧ್ಯವರ್ತಿಗಳ ಸಹಭಾಗಿತ್ವವಿಲ್ಲದೇ  ಪಾರದರ್ಶಕವಾಗಿ ಅರ್ಹ ಅಭ್ಯರ್ಥಿಗಳು ನೇರವಾಗಿ ಆಯ್ಕೆಯಾಗುತ್ತಿದ್ದಾರೆ. ಭ್ರಷ್ಟಾಚಾರ ಇಲ್ಲದೇ ಸರ್ಕಾರಿ ನೌಕರಿ ಪಡೆಯುತ್ತಿದ್ದಾರೆ. ಹೊಸ ಉದ್ಯೋಗಿಗಳು ದೇಶ ಸೇವೆ ಎಂಬ ಮನೋಭಾವದಿಂದ ಕೆಲಸ ಮಾಡಬೇಕು. ದೇಶ ಹಾಗೂ  ಸರ್ಕಾರದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಬೇಕಾಗಿದೆ‌ ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಹೊಸದಾಗಿ ಸರ್ಕಾರಿ ಉದ್ಯೋಗ ಪಡೆದುಕೊಂಡ 10೦ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಶೃತಿ ಹಾಗೂ ವಿದ್ಯಾಧರ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ವಿಜಯಕುಮಾರ್, ಗುರುದೀಪಸಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು. ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶೋಕ ಚಂದ್ರ ಸ್ವಾಗತಿಸಿದರು. ಸುರೇಖಾ ಪ್ರಾರ್ಥಿಸಿದರು. ಮಾಯಾ ರಾಮನ್ ನಿರೂಪಿಸಿ, ವಂದಿಸಿದರು.

administrator

Related Articles

Leave a Reply

Your email address will not be published. Required fields are marked *