ಹುಬ್ಬಳ್ಳಿ-ಧಾರವಾಡ ಸುದ್ದಿ

ವೀಣಾ ಬರದ್ವಾಡ 22ನೇ ಮೇಯರ್

ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಮುಂದುವರಿದ ಬಿಜೆಪಿ ಪಾರಮ್ಯ

ಸತೀಶ ಹಾನಗಲ್ ಉಪಮೇಯರ್ ಪಟ್ಟ

ಬಿಜೆಪಿ ಸದಸ್ಯೆ ಧೋಂಗಡಿ ಗೈರು

ಕಾಂಗ್ರೆಸ್ ಕಸರತ್ತು ವ್ಯರ್ಥ

ಬಹುಸಂಖ್ಯಾತರಿಗೆ ಮಣೆ

ಹುಬ್ಬಳ್ಳಿ : ಭಾರೀ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಇಪ್ಪತ್ತೆರಡನೇ ಮೇಯರ್ ಆಗಿ 49ನೇ ವಾರ್ಡಿನಿಂದ ಮೊದಲ ಬಾರಿ ಆಯ್ಕೆಯಾಗಿರುವ ವೀಣಾ ಚೇತನ ಬಾರದ್ವಾಡ ಹಾಗೂ ಉಪ ಮೇಯರ್ ಆಗಿ ಹಿರಿಯ ಸದಸ್ಯ ಸತೀಶ ಹಾನಗಲ್ ಆಯ್ಕೆಯಾಗಿದ್ದಾರೆ.


ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಪ್ರಾದೇಶಿಕ ಆಯುಕ್ತರ ನಿತೇಶ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ 46ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ ಅಭ್ಯರ್ಥಿಯಾದ ಸುವರ್ಣ ಕಲಕುಂಟ್ಲ 37 ಮತಗಳನ್ನು ಪಡೆದು ಪರಾಭವಗೊಂಡರು. ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ನಿವಾಸವಿರುವ ವಾರ್ಡನ ಸದಸ್ಯೆ ಎಂಬ ಹಿರಿಮೆ ವೀಣಾ ಅವರದ್ದಾಗಿದೆ.


ಉಪ ಮೇಯರ್ ಆಗಿ ೩೨ನೇ ವಾರ್ಡಿನ ಸದಸ್ಯ ಸತೀಶ ಹಾನಗಲ್ ಅವರ ಬಹುದಿನಗಳ ಅಧಿಕಾರದ ಆಸೆ ಇಂದು ಉಪಮೇಯರ್ ಆಗುವುದರೊಂದಿಗೆ ಈಡೇರಿದೆ. ಮತದಾನದಲ್ಲಿ ಪಾಲಿಕೆ ಸದಸ್ಯರು ಮತ್ತು ಜನಪ್ರತಿನಿಧಿಗಳು ಸೇರಿ ಒಟ್ಟು 85 ಜನ ಪಾಲ್ಗೊಂಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಪಾಲ್ಗೊಂಡಿರಲಿಲ್ಲ. ಕೆಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಪಾಲ್ಗೊಂಡಿದ್ದರು.


ಬೆಳಿಗ್ಗೆ ದಾಂಡೇಲಿ ರೆಸಾರ್ಟನಿಂದ ಆಗಮಿಸಿದ ಬಿಜೆಪಿ ಸದಸ್ಯರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಂತಿಮವಾಗಿ ಸಭೆ ನಡೆಸಿ ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಯಿತು.


ನಿನ್ನೆ ದಾಂಡೇಲಿಯಲ್ಲಿ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮತ್ತಿತರರು ಹಲವು ಸುತ್ತಿನ ಚರ್ಚೆಯನ್ನು ಬಿಜೆಪಿ ಸದಸ್ಯರೊಂದಿಗೆ ನಡೆಸಿದ್ದರಲ್ಲದೇ ಧಾರವಾಡದ ಜ್ಯೋತಿ ಪಾಟೀಲ, 57ನೇ ವಾರ್ಡಿನ ಮೀನಾಕ್ಷಿ ವಂಟಮೂರಿ, ಅವರ ಹೆಸರು ಚಾಲ್ತಿಯಲ್ಲಿದ್ದವು. ಅಲ್ಲದೇ ಮದ್ಯರಾತ್ರಿ ವೇಳೆಗೆ ವಂಟಮೂರಿ ಮತ್ತು ಸತೀಶ ಅಂತಿಮಗೊಂಡಿದ್ದಾರೆಂಬ ಗುಸು ಗುಸು ಇತ್ತು.


ಆದರೆ ಬೆಳಗಾಗುವುದರೊಳಗೆ ಬದಲಾದ ಲೆಕ್ಕಾಚಾರದಲ್ಲಿ ವೀಣಾ ಬರದ್ವಾಡ ಅವರ ಹೆಸರು ಅಂತಿಮಗೊಂಡಿತಲ್ಲದೇ ತಮ್ಮ ವಾರ್ಡಿನ ಸದಸ್ಯರನ್ನು ಮೇಯರ್ ಪಟ್ಟಕ್ಕೇರಿಸುವಲ್ಲಿ ಶಾಸಕ ಟೆಂಗಿನಕಾಯಿ ಯಶಸ್ವಿಯಾದರಲ್ಲದೇ ವಾಡಿಕೆಯಂತೆ ಪ್ರಥಮ ಪ್ರಜೆ ಸ್ಥಾನ ಹುಬ್ಬಳ್ಳಿಗೊಲಿದಂತಾಯಿತು. ಅರವಿಂದ ಬೆಲ್ಲದ ಜ್ಯೋತಿ ಪಾಟೀಲ ಪರ ಬ್ಯಾಟಿಂಗ ಮಾಡಿದರೂ ಅಂತಿಮವಾಗಿ ಉಪ ಮೇಯರ್ ಪಟ್ಟ ತಮ್ಮ ಕ್ಷೇತ್ರಕ್ಕೆ ಧಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದಂತಾಯಿತು. ಮಾಮೂಲಿನಂತೆ ಈ ಬಾರಿಯೂ ಪೂರ್ವ ಕ್ಷೇತ್ರಕ್ಕೆ ಯಾವುದೇ ಮಹತ್ವದ ಹುದ್ದೆ ದೊರೆಯದೆ ಅನಾಥವಾಯಿತು.


ವರಿಷ್ಠರ ತೀರ್ಮಾನದಂತೆ ನಿರ್ಗಮಿಸುತ್ತಿರುವ ಮೇಯರ್ ಈರೇಶ ಅಂಚಟಗೇರಿ ನೇತೃತ್ವದಲ್ಲಿ ತೆರಳಿ ವೀಣಾ ಹಾಗೂ ಸತೀಶ ತಮ್ಮ ನಾಮಪತ್ರ ಸಲ್ಲಿಸಿದರು.
ಮಯೂರ ರೆಸಾರ್ಟಲ್ಲಿ ಕಾಂಗ್ರೆಸ್ ಪಡೆ ಅಭ್ಯರ್ಥಿಗಳನ್ನಾಗಿ ಹಿರಿಯ ಸದಸ್ಯೆ ಸುವರ್ಣಾ ಕಲಕುಂಟ್ಲ ಹಾಗೂ ಧಾರವಾಡದ ರಾಜಶೇಖರ ಕಮತಿ ಅವರನ್ನು ಅಂತಿಮಗೊಳಿಸಿ ನಾಮಪತ್ರಕ್ಕೆ ಹಸಿರುನಿಶಾನೆ ತೋರಿತು. ಎಂಐಎಂನಿಂದ ವಹೀದಾ ಕಿತ್ತೂರ ಮೇಯರ್ ಸ್ಥಾನಕ್ಕೆ ಮತ್ತು ಉಪ ಮೇಯರ್ ಸ್ಥಾನಕ್ಕೆ ನಜೀರ ಹೊನ್ಯಾಳ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಸದಸ್ಯೆ ಧೋಂಗಡಿ ಗೈರು

ಸೆಂಟ್ರಲ್ ಕ್ಷೇತ್ರದ 54ನೇ ವಾರ್ಡಿನ ಕೇಸರಿ ಪಡೆಯ ಸದಸ್ಯೆ ಸರಸ್ವತಿ ಧೋಂಗಡಿ ಚುನಾವಣೆಗೆ ಗೈರಾಗಿ ಇಂದು ಮತದಾನದಿಂದ ದೂರವುಳಿದರು. ಉಳಿದಂತೆ ಈಗಾಗಲೇ ಬಿಜೆಪಿಯಲ್ಲೇ ಗುರುತಿಸಿಕೊಂಡಿರುವ ಪಕ್ಷೇತರರಾದ ಚಂದ್ರಿಕಾ ಮೇಸ್ತ್ರಿ, ದುರ್ಗಮ್ಮ ಬಿಜವಾಡ ಹಾಗೂ ಕಿಶನ್ ಬೆಳಗಾವಿ ಕಮಲಕ್ಕೆ ಜೈ ಎಂದರು.

ಕಾಂಗ್ರೆಸ್ ಕಸರತ್ತು ವ್ಯರ್ಥ

ಪಾಲಿಕೆಯ ಪ್ರಸಕ್ತ ಅವಧಿಯ ಎರಡನೇ ಅವಧಿಯಲ್ಲಿ ಬಿಜೆಪಿಯನ್ನು ಮೇಯರ್ ಪಟ್ಟದಿಂದ ದೂರವುಳಿಯುವಂತೆ ಮಾಡಲು ವ್ಯಾಪಕ ಕಸರತ್ತು ನಡೆಸಿತಾದರೂ ಯಶಸ್ವಿಯಾಗಲಿಲ್ಲ. ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಹಲವರು ಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. ಅಲ್ಲದೇ ಎಂಐಎಂ ಸಹ ಕಾಂಗ್ರೆಸ್ ಬೆಂಬಲಿಸದ ಪರಿಣಾಮ ಯಶಸ್ಸು ದೊರೆಯಲಿಲ್ಲ.

ಬಹುಸಂಖ್ಯಾತರಿಗೆ ಮಣೆ

 

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಹುಸಂಖ್ಯಾತರಿಗೆ ಪಟ್ಟ ನಿಕ್ಕಿ ಎಂಬಂತೆಯೇ ಇಂದು ಮೇಯರ್ ಆಯ್ಕೆ ನಡೆದಿದೆಯಲ್ಲದೇ ಮತ್ತೆ ಧಾರವಾಡದ ಪಾಲಾಗಬಹುದೆಂಬ ಲೆಕ್ಕಾಚಾರವೂ ಹುಸಿಯಾಗಿ ಎರಡೂ ಹುಬ್ಬಳ್ಳಿಯಲ್ಲಿಯೇ ಅದರಲ್ಲೂ ಗೋಕುಲ ರಸ್ತೆ ಅಕ್ಕ ಪಕ್ಕದ ವಾರ್ಡಿನ ಸದಸ್ಯರಿಗೆ ಧಕ್ಕಿರುವುದು ವಿಶೇಷವಾಗಿದೆ. 32ನೇ ವಾರ್ಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಗೆ ಬಂದರೆ, ಮೇಯರ್ ಬರದ್ವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬರಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *