ಹುಬ್ಬಳ್ಳಿ, ಧಾರವಾಡದಲ್ಲಿ ಬಹುತೇಕ ವಹಿವಾಟು ಸ್ಥಗಿತ, ಉದ್ಯಮಗಳು ಸ್ಥಬ್ಧ
ಬೆಳಗಾವಿ, ಕೊಪ್ಪಳ, ಗದಗ, ಬಳ್ಳಾರಿ, ಕಲಬುರಗಿ ಸೇರಿ 11 ಜಿಲ್ಲೆಗಳಲ್ಲಿ ಪ್ರತಿಭಟನೆ
ಹುಬ್ಬಳ್ಳಿ: ಭಾರೀ ಪ್ರಮಾಣದಲ್ಲಿ ವಿದ್ಯುತ್ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿರುವ ಕರ್ನಾಟಕ ಬಂದ್ಗೆ ಧಾರವಾಡ ಸೇರಿ 11 ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಹೊಟೆಲ್, ಕೈಗಾರಿಕೆ, , ಅಟೋಮೊಬೈಲ್ ಹಾಗೂ ಜವಳಿ ಸೇರಿದಂತೆ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತವಾಗಿವೆ. ತುರ್ತು ಸೇವೆ ಹೊರತುಪಡಿಸಿ ವ್ಯಾಪಾರ ವಹಿವಾಟು ಎಲ್ಲವೂ ಬಂದ್ ಆಗಿದ್ದು, ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ಉದ್ಯಮಗಳು ಇಂದು ಸಂಪೂರ್ಣ ಸ್ಥಬ್ಧವಾಗಿದೆ.
ಪೇಡೆ ನಗರಿಯಲ್ಲಿ ಬಹುತೇಕ ಅಂಗಡಿ ಮುಗ್ಗಟ್ಟು ಬಂದ್ ಆಗಿವೆ. ಕಿರಾಣಿ, ಬಟ್ಟೆ, ಸ್ಟೇಷನರಿ ವ್ಯಾಪಾರ ಬಂದ್ ಆಗಿವೆ. ಎಪಿಎಂಸಿ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಸೂಪರ್ ಮಾರ್ಕೆಟ್, ಸುಭಾಷ್ ರಸ್ತೆ ಮಾರ್ಕೆಟಿನಲ್ಲೂ ಅಂಗಡಿಗಳು ತೆರೆದಿಲ್ಲ.
ಕೆಲ ಹೊಟೇಲ್ಗಳು ಮಾತ್ರ ಆರಂಭವಾಗಿವೆ. ಸಾರಿಗೆ ಸಂಚಾರ ಯಾವುದೇ ವ್ಯತ್ಯಯವಾಗಿಲ್ಲವಾಗಿದ್ದು, ಬಸ್ಗಳು,ರಿಕ್ಷಾಗಳು ಯಥಾ ಪ್ರಕಾರ ಸಂಚರಿಸುತ್ತಿವೆ. ಅವಳಿನಗರದಲ್ಲಿ ಬೀದಿ ಬದಿ ವ್ಯಾಪಾರ ಮಾತ್ರ ಯಥಾಪ್ರಕಾರವಿದೆ.
ಬೆಳಿಗ್ಗೆ ಕರ್ನಾಟಕ ವಾಣಜ್ಯೋದ್ಯಮ ಸಂಸ್ಥೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಹಿಳಾ ಕಾಲೇಜು, ಕೊಪ್ಪಿಕರ ರಸ್ತೆಯ ಮುಖಾಂತರ ಹಾಯ್ದು ಮಿನಿವಿಧಾನಸೌಧಕ್ಕೆ ಆಗಮಿಸಿ ಮನವಿ ಸಲ್ಲಿಸಿ ವಿದ್ಯುತ್ ದರ ಏರಿಕೆ ಹಿಂಪಡೆಯಲು ಒತ್ತಾಯಿಸಿದರು.
ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ, ಮಹೇಂದ್ರ ಲದ್ದಡ,ವಸಂತ ಲದ್ವಾ, ಉಪಾಧ್ಯಕ್ಷ ಸಂದೀಪ ಬಿಡಾಸಾರಿಯಾ, ಗೌರವ ಕಾರ್ಯದರ್ಶಿ ಪ್ರವೀಣ ಅಂಗಡಿ, ಉದ್ಯಮಿಗಳಾದ ಸಿದ್ದೇಶ್ವರ ಕಮ್ಮಾರ, ಬಾಳು ಮಗಜಿಕೊಂಡಿ,ಶಾಂತರಾಜ ಪೋಳ, ಪ್ರಕಾಶ ಶೃಂಗೇರಿ,ಹೊಟೆಲ್ ಮಾಲಕರ ಸಂಘ, ಕಲ್ಯಾಣ ಮಂಟಪ ಮಾಲೀಕರ ಸಂಘ ಸೇರಿದಂತೆ ವಿವಿಧ 25 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದವು.
ಧಾರವಾಡದಲ್ಲಿಯೂ ಧಾರವಾಡ ವಾಣಿಜ್ಯೋದ್ಯಮ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಅರ್ಪಿಸಲಾಯಿತಲ್ಲದೇ ಮೆರವಣಿಗೆಯ ನೇತೃತ್ವವನ್ನು ಅಧ್ಯಕ್ಷ ಪ್ರಭು ನಡಕಟ್ಟಿ, ರವೀಂದ್ರ ಆಕಳವಾಡಿ, ಶಿವಶಂಕರ ಹಂಪಣ್ಣವರ, ಪ್ರೀಯದರ್ಶನ್ ಕಣವಿಯವರ, ರವಿ ಯಲಿಗಾರ, ಉದಯ ಯಂಡಿಗೇರಿ, ಸಂದೀಪ ಸಾಬಳೆ, ವೆಂಕಟೇಶ ಬೆಡಗಬಟ್ಟು, ಕಾಂತೇಶ ಕುಲಕರ್ಣಿ, ವಿಜಯ ಮುಧೋಳಕರ, ನಾಗರಾಜ ದೊಡ್ಡಮನಿ, ಬಲರಾಮ ಕಂದಕೂರ, ಸಂದೀಪ ಸಾಂಗ್ಲಿಕರ, ರಾಧಾಕೃಷ್ಣ ಶೆಟ್ಟಿ, ನಾಗರಾಜ ಯಲಿಗಾರ, ಲಲಿತ ಭಂಡಾರಿ, ಸಿ.ವಿ. ಬಳಿಗಾರ, ಅಮರ ಟಿಕಾರೆ, ಕಿಶೋರ ಹಾವಣಗಿ, ಎಸ್.ಸಿ.ಪಾಟೀಲ(ರಾಜು), ಶ್ರೀಧರ ಶೇಟ್, ಅಶೋಕ ಅಮ್ಮಿನಗಡ, ಮುಂತಾದವರಿದ್ದರು.
ಬೆಳಗಾವಿಯಲ್ಲೂ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ದಿ ಬೆಳಗಾವಿ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ವತಿಯಿಂದ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತವಾಗಿದ್ದು, ಉದ್ಯಮಿಗಳು ಬೆಳಗಾವಿಯ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬಳ್ಳಾರಿಯಲ್ಲಿ ಕರ್ನಾಟಕ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಟೆಲ್ ಸೇರಿದಂತೆ ವ್ಯಾಪಾರ ವಹಿವಾಟು ಸ್ಥಬ್ಧವಾಗಿದೆ. ಕೊಪ್ಪಳದಲ್ಲಿ ಎಂದಿನಂತೆ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿಲ್ಲ. ಆದರೆ, ಪ್ರತಿಭಟನಾ ಸಮಯದಲ್ಲಷ್ಟೇ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕರ್ನಾಟಕ ಬಂದ್ಗೆ ಕಾರವಾರದ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದು, ಆಟೋ ಸಂಚಾರ ಸಂಪೂರ್ಣ ಸ್ಥಗಿತ ವಾಗಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಕಲಬುರಗಿಯ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಗರದ ಚೌಕ್ ವೃತ್ತದ ಬಳಿ ಪ್ರತಿಭಟನೆ ನಡೆದಿದ್ದು,ವಾಣಿಜ್ಯೋದ್ಯಮಿಗಳು ಹಾಗೂ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಬೆಂಬಲಿಸದ ಎಫ್ಕೆಸಿಸಿಐ: ದರ ಏರಿಕೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಎಫ್ಕೆಸಿಸಿಐ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ವಿವಿಧ ವಾಣಿಜ್ಯ ಸಂಘಟನೆಗಳು ಬಂದ್ನಿಂದ ದೂರ ಉಳಿದಿದ್ದು ಹಾಗಾಗಿ ಹಳೇ ಮೈಸೂರ ಭಾಗದ ಯಾವ ಸಂಘಟನೆಗಳು ಬೆಂಬಲ ಸೂಚಿಸಿಲ್ಲ.