ಶಿವು ಹಿರೇಮಠ ಅಥವಾ ಈರೇಶ ಅಂಚಟಗೇರಿ ಇಬ್ಬರಲ್ಲೊಬ್ಬರಿಗೆ ಜವಾಬ್ದಾರಿ?
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಪ್ರಸಕ್ತ ಅವಧಿಯ ಎರಡನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಪಟ್ಟವನ್ನು ಅಲಂಕರಿಸಿರುವ ಭಾರತೀಯ ಜನತಾ ಪಕ್ಷ ಹಿರಿಯ ಸದಸ್ಯರೊಬ್ಬರಿಗೆ ಹಾಗೂ ಅನುಭವಿಗಳಿಗೆ ಸಭಾ ನಾಯಕ ಪಟ್ಟ ನೀಡಲು ನಿರ್ಧರಿಸಿದೆ.
ಮೇಯರ್ ವೀಣಾ ಬರದ್ವಾಡ ಪ್ರಥಮ ಬಾರಿ ಆಯ್ಕೆಯಾದವರಾಗಿದ್ದು ಅನುಭವದ ಕೊರತೆ ಇರುವುದರಿಂದ ಸೂಕ್ತ ಮಾರ್ಗದರ್ಶನ ಅಲ್ಲದೇ ಎಲ್ಲ ಸದಸ್ಯರನ್ನೂ ಒಗ್ಗಟ್ಟಾಗಿ ಕರೆದೊಯ್ಯುವವರಿಗೆ ಇಷ್ಟರಲ್ಲೇ ನೇಮಕ ಮಾಡುವುದು ನಿಶ್ಚಿತವಾಗಿದೆ.
ಈರೇಶ ಅಂಚಟಗೇರಿ – ಉಮಾ ಮುಕುಂದ ಅವಧಿಯಲ್ಲಿ ಸಭಾ ನಾಯಕರಾಗಿ ತಿಪ್ಪಣ್ಣ ಮಜ್ಜಗಿ ಅವರು ಕಾರ್ಯ ನಿರ್ವಹಿಸಿದ್ದರು.
ಈ ಬಾರಿ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳೂ ಹುಬ್ಬಳ್ಳಿ ಪಾಲಾಗಿರುವುದರಿಂದ ಪಾಲಿಕೆಯಲ್ಲಿ ಧಾರವಾಡಕ್ಕೂ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ಪಕ್ಷದ ಮೂಲಗಳ ಪ್ರಕಾರ ಮಾಜಿ ಮೇಯರ್‌ಗಳಾದ ಶಿವು ಹಿರೇಮಠ ಹಾಗೂ ಈರೇಶ ಅಂಚಟಗೇರಿ ಇಬ್ಬರಲ್ಲೊಬ್ಬರಿಗೆ ಸಭಾನಾಯಕ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ.
ಶಿವು ಹಿರೇಮಠರೂ ಸಹ ಈ ಹಿಂದೆ ಮೇಯರ್ ಗೌನ್ ಧರಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದವರಾಗಿದ್ದಾರೆ. ದಿ. 20ರಂದು ಗದ್ದುಗೆಯಿಂದ ಕೆಳಗಿಳಿದಿರುವ ಅಂಚಟಗೇರಿ ತಮ್ಮ 13 ತಿಂಗಳ ಅವಧಿಯಲ್ಲಿ ಪ್ರಥಮ ಪ್ರಜೆಯಾಗಿ ಯಾವ ರೀತಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬಹುದು ಎಂಬುದನ್ನು ತೋರಿಸಿ ತಮ್ಮದೇ ಛಾಪು ಮೂಡಿಸಿದ್ದರು.