ಹುಬ್ಬಳ್ಳಿ: ಅಮರನಾಥದಲ್ಲಿ ಸಿಲುಕಿಕೊಂಡಿದ್ದ ಪೇಡೆ ನಗರಿಯ ಐವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದು, ಅವರು ಸುರಕ್ಷಿತವಾಗಿ ಶ್ರೀನಗರ ತಲುಪಿದ್ದಾರೆ.
ಈ ಕುರಿತಾಗಿ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು ’ಅಮರಾನಾಥ್ ಯಾತ್ರೆಗೆ ತೆರಳಿ ಸ್ವಾಮಿಯ ದರ್ಶನ್ ಪಡೆದು ಮರಳಿ ಬರುವಾಗ ಪಂಚತರಣಿಯಲ್ಲಿ ಅಪಾರ ಮಳೆಯಾಗಿ ಗುಡ್ಡ ಕುಸಿಯುತ್ತಿದ್ದವು. 4 ದಿನದಿಂದ 36 ಕಿಮೀ ಗುಡ್ಡದ ಮೇಲೆ ಸಿಲುಕಿಕೊಂಡಿದ್ದೆವು. ಇಂದು ಮಳೆ ಕಡಿಮೆಯಾಗಿದ್ದು ನಾವು ಸುರಕ್ಷಿತವಾಗಿ ಮರಳುತ್ತಿದ್ದೇವೆ. ಎಲ್ಲಾ ಮಾಧ್ಯಮದ ಮಿತ್ರರಿಗೆ ಹಾಗೂ ಸಚಿವರಾದ ಪ್ರಹ್ಲಾದ್ ಜೋಶಿ, ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ವಿನಯ್ ಕುಲಕರ್ಣಿ ಇವರೆಲ್ಲರೂ ನಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಇವರಿಗೆಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಧಾರವಾಡದಿಂದ ತೆರಳಿದ ತಂಡ ಪಂಚತಾರಣಿ ಬಳಿ ಗುಡ್ಡ ಕುಸಿತದ ಕಾರಣ ಸಿಲುಕಿದ್ದರು. ಕಳೆದ ನಾಲ್ಕು ದಿನಗಳಿಂದ ಅವರು ಟೆಂಟ್ನಲ್ಲಿ ವಾಸ ಮಾಡಿದ್ದಾರೆ. ಈ ಸಂದರ್ಭ ಅವರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾಗ ಸೂಕ್ತ ರಕ್ಷಣೆ ನೀಡುವಂತೆ ಸಿಎಂ ಕೂಡ ಸೂಚನೆ ನೀಡಿದ್ದರು. ಸದ್ಯ ರಾಕೇಶ ನಾಝರೆ, ವಿಠ್ಠಲ ಬಾಚಗುಂಡಿ, ಹರೀಶ ಸಾಳುಂಕೆ, ನಾಗರಾಜ ಮತ್ತು ಮಡಿವಾಳಪ್ಪ ಕೊಟಬಾಗಿ ಇವರು ಸದ್ಯ ಶ್ರೀನಗರದಲ್ಲಿದ್ದಾರೆ.