ಮನುಸ್ಮೃತಿ ಪ್ರಸ್ತಾಪಿಸುವ ಹುನ್ನಾರ: ಪಿ.ಎಚ್.ನೀರಲಕೇರಿ
ಧಾರವಾಡ: ಮಾಜಿ ಗೃಹ ಮಂತ್ರಿ ಅರಗ ಜ್ಞಾನೆಂದ್ರ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರುಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ಖಂಡನೀಯ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಗ ಜ್ಞಾನೇಂದ್ರರು ಬಾಯಿ ಚಪಲಕ್ಕೆ ಮಾತನಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಮಾತನಾಡುತ್ತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವೈಯಕ್ತಿಕ ಅವಹೇಳನ ಸರಿಯಲ್ಲ. ಇದೇ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕುರಿತು ಮಾತನಾಡಿದ್ದು ಸರಿಯಲ್ಲ. ಅರಗ ಅವರು ಆರ್.ಎಸ್.ಎಸ್.ನ ಮುಖವಾಣಿಯಂತೆ ಮಾತನಾಡಿದ್ದಾರೆ. ಇದು ಮನುಸ್ಮೃತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸುವ ಹುನ್ನಾರ ಆಗಿದೆ. ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿ ಕುರಿತು ಇತ್ತೀಚಿನ ಅಧಿವೇಶನದಲ್ಲಿ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಮಾತನಾಡಿದ್ದಾರೆ. ಆದರೆ,ಕವಿವಿ ಹಣಕಾಸು ಕಳೆದ ಹಲವಾರು ವರ್ಷಗಳಿಂದ ಸರಿಯಿಲ್ಲ. ಆದರೆ, ತಮ್ಮದೇ ಪಕ್ಷದ ಸರಕಾರ ಇದ್ದಾಗ ಮಾತನಾಡದ ಪ್ರೊ.ಸಂಕನೂರ ಅವರು ಈಗ ಕವಿವಿ ಮೇಲೆ ತೋರಿಸುತ್ತಿರುವ ಕಾಳಜಿ ಆಶ್ಚರ್ಯವಾಗಿ ಎಂದಿದ್ದಾರೆ. ಮುಖಂಡರಾದ ಸಿದ್ದಣ್ಣ ಕಂಬಾರ, ವಿ.ಜಿ. ಕೊಂಗವಾಡ ಸುದ್ದಿ ಗೋಷ್ಠಿಯಲ್ಲಿದ್ದರು.