ಐದು ಕಡೆ 15 ಅಧಿಕಾರಿಗಳಿಂದ ದಾಳಿ
’ಶರಣ ಸುವರ್ಣ’ದಲ್ಲಿ ಮಹತ್ವದ ದಾಖಲೆ ವಶ
ಧಾರವಾಡ: ಈ ಹಿಂದೆ ಪೇಡೆನಗರಿಯಲ್ಲಿ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಹಾಗೂ ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಅದೇ ಹುದ್ದೆಯಲ್ಲಿರುವ ಡಾ. ಸಂತೋಷ ಆನಿಶೆಟ್ಟರ ಅವರ ’ಶರಣಸುವರ್ಣ’ ನಿವಾಸದ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿಯಾಗಿದೆ.
ಧಾರವಾಡದ ಸಪ್ತಾಪುರದ ಮಿಚಿಗನ್ ಲೇ ಔಟ್ನಲ್ಲಿರುವ ಕೋಟಿ ಕೋಟಿ ಬೆಲೆಬಾಳುವ ಮನೆಯನ್ನ ಹೊಂದಿರುವ ಆನಿಶೆಟ್ಟರ್, ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ಧಾರವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಟ್ಟಡ ಬಿದ್ದ ಪ್ರಕರಣಕ್ಕೆ ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು. ಏಕಾಏಕಿ ಇಂದು ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಆಸ್ತಿ ಸೇರಿದಂತೆ ಪ್ರಮುಖ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ.
ಧಾರವಾಡದ ಬಿಜಿಎಸ್ ಶಾಲೆ ಬಳಿ ಇರುವ ಸಂತೋಷ್ ಅನಿಶೆಟ್ಟರ ಸಹೋದರನ ಮನೆ, ವೆಂಕಟಾಪೂರ ಬಳಿ ಇರುವ ಬಂಗಲೆ, ಹಾವೇರಿ ಜಿಲ್ಲೆಯ ಆಲದಕಟ್ಟಿಯ ಇವರ ಸಹೋದರನ ನಿವಾಸ ಸೇರಿದಂತೆ ಐದು ಕಡೆ ೧೫ ಅಧಿಕಾರಿ ಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ, ಡಿಎಸ್ಪಿ ಎಸ್.ಎಂ.ರಾಗಿ ದಾಳಿ ನೇತೃತ್ವ ವಹಿಸಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಸಿಕ್ಕ ಬಲು ಅಪರೂಪದ ಅರಣ್ಯ ಹಾಗೂ ಆಂಟಿಕ್ ಪೀಸ್ಗಳನ್ನು ಕಂಡು ಕೆಲಕಾಲ ಲೋಕಾಯುಕ್ತ ಅಧಿಕಾರಿಗಳೇ ಗಾಬರಿಗೊಂಡಿದ್ದಾರೆ.