ಆಪರೇಷನ್ ಮಾಡುವುದೇ ಇವರ ಕೆಲಸ: ಜಗದೀಶ ಶೆಟ್ಟರ ತಿರುಗೇಟು
ಹುಬ್ಬಳ್ಳಿ: ಬಿ.ಎಲ್.ಸಂತೋಷ ಅವರು ಮೊದಲು ತಮ್ಮ ಪಕ್ಷದಲ್ಲಿ ಇರುವವರನ್ನು ಹಾಗೂ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲಿ. ಬೇರೆ ಪಕ್ಷದವರನ್ನು ಕರೆದುಕೊಂಡು ಹೊಸ ಸರಕಾರ ರಚನೆ ದೂರದ ಮಾತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡುವುದನ್ನು ಬಿಟ್ಟು ಬಿಡಲಿ. ಇಡೀ ರಾಷ್ಟ್ರದಲ್ಲಿ ಆಪರೇಶನ್ ಮಾಡುವುದೇ ಇವರ ಕೆಲಸ. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಜನರು ಯಾಕೆ ಮೂಲೆಗುಂಪು ಮಾಡಿದ್ದಾರೆ ಎಂಬುವುದನ್ನು ಮೊದಲು ಅವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ಗೆ ಜನರು 136 ಸ್ಥಾನ ನೀಡಿದ್ದಾರೆ. ಶಾಸಕರು ಅವರ ಸಂಪರ್ಕದಲ್ಲಿದ್ದರೆ ನಾಳೆಯಿಂದಲೇ ಆಪರೇಶನ್ ಶುರು ಮಾಡಲಿ ಎಂದು ಸವಾಲು ಹಾಕಿದರು.
ಪಕ್ಷದಲ್ಲಿರುವ ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರುವುದು ನಿಮ್ಮ ಕೆಲಸ. ಬೆಳಗ್ಗೆಯಿಂದ ಸಾಯಂಕಾಲವರೆಗೂ ಆಪರೇಶನ್ ಮಾಡುವುದೇ ಕೆಲಸವಾಗಿದೆ. ಜನರ ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬರುವತ್ತ ಚಿಂತನೆ ಮಾಡುವುದು ಬಿಟ್ಟು ವಾಮಮಾರ್ಗದ ಬಗ್ಗೆ ಹೆಚ್ವು ಯೋಚನೆ ಮಾಡುತ್ತಾರೆ ಅನ್ನಿಸುತ್ತಿದೆ. ಬಿಜೆಪಿ ಮುಳುಗುತ್ತಿರುವ ಹಡಗು. ಅವರ ಪಕ್ಷದ ಬಗ್ಗೆ ನಾನೇಕೆ ಮಾತನಾಡಲಿ ಎಂದರು.
ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಯಾರು ಎಂದು ಹೇಳಿದ್ದೇನೆ. ಹಿಂದೆಯೂ ಅವರ ಬಗ್ಗೆ ಮಾತನಾಡಿದ್ದೇನೆ. ಅಂತಹವರ ಬಗ್ಗೆ ದೆಹಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರು ಯೋಚನೆ ಮಾಡಬೇಕು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಜೊತೆ ನಾನು ಮಾತಾಡಿಲ್ಲ. ಹೈಕಮಾಂಡ್ ಕೂಡಾ ನನಗೆ ಏನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.