ಈದಗಾದಲ್ಲಿ ಗಣೇಶನ ಸ್ಥಾಪನೆ ಹಾದಿ ಸುಗಮ -ಚೆಂಡು ಆಯುಕ್ತರ ಅಂಗಳದಲ್ಲಿ
ಬಿಜೆಪಿ, ಹಿಂದೂ ಮುಖಂಡರಿಂದ ವಿಜಯೋತ್ಸವ
ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದ ಪಕ್ಕದ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈಕೋರ್ಟ ಪೀಠ ತಿರಸ್ಕರಿಸುವುದರೊಂದಿಗೆ ವಿಘ್ನವಿನಾಯಕನ ಸ್ಥಾಪನೆಗೆ ಇದ್ದ ದೊಡ್ಡ ಅಡ್ಡಿ ನಿವಾರಣೆಯಾಗಿದೆ.
ಧಾರವಾಡ ಪೀಠದ ನಾಲ್ಕನೇ ಹಾಲ್‌ನಲ್ಲಿಂದು ಏಕ ಸದಸ್ಯ ಪೀಠದ ಎದುರು ವಿಚಾರಣೆ ಬಂದು ನ್ಯಾಯಧೀಶರಾದ ಸಚಿನ್ ಮಗದುಮ್ ಅವರು, ಹುಬ್ಬಳ್ಳಿ ಈದಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮಹಾನಗರ ಪಾಲಿಕೆ ಅನುಮತಿ ನೀಡಿ ಠರಾವ್ ಪಾಸ್ ಮಾಡಿದ್ದು ಸರಿಯಲ್ಲ ಹೀಗಾಗಿ ಪಾಲಿಕೆಯ ಠರಾವಿಗೆ ತಡೆಯಾಜ್ಞೆ ನೀಡಬೇಕೆಂಬ ಅಂಜುಮನ್ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿದರು.
ಈ ಪ್ರಕರಣ ನಿನ್ನೆ ವಿಚಾರಣೆಗೆ ಬಂದು ಇಂದಿಗೆ ಮುಂದೂಡಲ್ಪಟ್ಟಿತ್ತು. ಅಂಜುಮನ ಪರ ಸಾಧಿಕ ಗೂಡವಾಲಾ, ಮೇಯರ್ ಪರ ಪ್ರಭುಲಿಂಗ ನಾವದಗಿ, ಸಂಜು ಬಡಸ್ಕರ ಪರ ವಿರೇಶ ಬೂದಿಹಾಳ, ದೊಡ್ಡಗೌಡ್ರ, ಆಯುಕ್ತರ ಪರ ಗುರು ಗಚ್ಚಿನಮಠ ವಾದ ಮಂಡಿಸಿದ್ದರು. ಕಳೆದ ದಿ.31ರಂದು ನಡೆದ ಪಾಲಿಕೆ ಸಭೆಯಲ್ಲಿ ಚನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳಿಗೆ ಮುಂದಿನ ಐದು ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಠರಾವು ಪಾಸ್ ಮಾಡಲಾಗಿತ್ತು.
ರಾಣಿ ಚನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಿನ್ನೆಯಿಂದಲೇ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು ಇಂದು ಕೋರ್ಟ ತೀರ್ಪು ಹೊರಬೀಳುತ್ತಿದ್ದಂತೆಯೇ ಎಲ್ಲರೂ ಗಣೇಶನ ಮೂರ್ತಿಗಳನ್ನು ಹಿಡಿದು ಸಂಭ್ರಮಾಚರಣೆ ನಡೆಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಸಭಾನಾಯಕ ಶಿವು ಹಿರೇಮಠ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ,ಶಿವು ಮೆಣಸಿನಕಾಯಿ, ಕಿಶನ್ ಬೆಳಗಾವಿ, ಮುಖಂಡರಾದ ಶಿವಾನಂದ ಮುತ್ತಣ್ಣವರ, ಕ್ರಷ್ಣಾ ಗಂಡಗಾಳೆಕರ, ಈಶ್ವರಗೌಡ ಪಾಟೀಲ,ರಾಜು ಜರತಾರಘರ, ಸತೀಶ ಶೇಜವಾಡಕರ, ಸಂತೋಷ ವೆರ್ಣೆಕರ, ದತ್ತಮೂರ್ತಿ ಕುಲಕರ್ಣಿ,ರಾಜಶ್ರೀ ಜಡಿ,ಮಹೇಂದ್ರ ಕೌತಾಳ, ಮಿಥುನ್ ಚವ್ಹಾಣ ಸೇರಿದಂತೆ ನೂರಾರು ಮಹಿಳಾ ಮುಖಂಡರು ಅನೇಕರಿದ್ದರು.
ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಪ್ರತಿಭಟನೆ ಅಹೋರಾತ್ರಿ ನಡೆಯಿತಲ್ಲದೇ, ಪಾಲಿಕೆಯ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಯಲ್ಲಿಯೇ ಮಲಗಿ ಪ್ರತಿಭಟಿಸಿದ್ದರು.
ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಗೆ ರೈಲಿನ ಮೂಲಕ ಬೆಳಿಗ್ಗೆ ಬಂದು ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ತಾವು ಸಹ ಧರಣಿ ಕೂತು ಬೆಂಬಲ ಸೂಚಿಸಿ ದರು. ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ’ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಗಸ್ಟ್ ೩೧ರಂದೇ ಠರಾವು ಪಾಸಾಗಿದೆ. ಆದರೆ, ಪಾಲಿಕೆ ಆಯುಕ್ತರು ಈವರೆಗೂ ಅನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ’ ಎಂದರು.
ಹೈಕೋರ್ಟ ತೀರ್ಪಿನ ಹಿನ್ನೆಲೆಯಲ್ಲಿ ಈಗ ಪಾಲಿಕೆ ಆಯುಕ್ತರು ಯಾವ ನಿರ್ಧಾರ ಕೈಗೊಳ್ಳುವರು ಎಂಬುದು ಕುತೂಹಲ ಕೆರಳಿಸಿದೆ. ಕಳೆದ ಬಾರಿಯಂತೆ ಮೂರು ದಿನ ಅನುಮತಿ ನೀಡುವರೋ ಅಥವಾ ಸರ್ಕಾರಕ್ಕೆ ಬರೆಯುವರೋ ಕಾದು ನೋಡಬೇಕಿದೆ. 1990ರ ದಶಕದಲ್ಲಿನ ರಾಷ್ಟ್ರಧ್ವಜ ಹೋರಾಟದಂತೆಯೇ ಮತ್ತೆ ಈ ಬಾರಿಯ ಗಣೇಶೋತ್ಸವ ಆತಂಕದ ನೆರಳು ಸೃಷ್ಟಿಸಿದೆ.
’ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಕೆಲವರು ಕೋರ್ಟ್’ಗೆ ಹೋಗಿದ್ದರು. ಇಂದು ಕೋರ್ಟನಲ್ಲಿ ತೀರ್ಪು ಹೊರ ಬಿದ್ದಿದ್ದು ಎಲ್ಲ ಅಡ್ಡಿ ನಿವಾರಣೆಯಾಗಿದ್ದು ಕೂಡಲೇ ಆಯುಕ್ತರು ಕಳೆದ ಬಾರಿ ನೀಡಿದಂತೆ ಕೂಡಲೇ ಅನುಮತಿ ನೀಡಬೇಕು.
’ಹುಬ್ಬಳ್ಳಿ ಅಂಜುಮನ್ ಸಂಸ್ಥೆಯವರು ಪದೇಪದೇ ಕೋರ್ಟ್’ಗೆ ಹೋಗುತ್ತಿರುವುದು ಸರಿಯಲ್ಲ. ಪಾಲಿಕೆಯ ಆಸ್ತಿಯಲ್ಲಿ ವರ್ಷದಲ್ಲಿ ಎರಡು ದಿನ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರಿಗೂ ಅವಕಾಶ ನೀಡಲಾಗಿದೆ.ಈಗಾಗಲೇ ಠರಾವಿನಲ್ಲಿ ಐದು ವರ್ಷಗಳ ಕಾಲ ಚನ್ನಮ್ಮ ಮೈದಾನ ಗಜಾನನೋತ್ಸವ ಮಂಡಳಿಗೆ ಅನುಮತಿ ನೀಡಲಾಗಿದೆ. ಎಲ್ಲರ ಸಹಕಾರದಿಂದ ವಿಜ್ರಂಭಣೆಯಿಂದ ಆಚರಿಸಲಾಗುವುದು.ಗಣೇಶ ಪ್ರತಿಷ್ಠಾಪನೆಗೆ ಹಗಲಿರುಳು ಶ್ರಮಿಸಿ ಮಾರ್ಗದರ್ಶನ ನೀಡಿದ ಕೇಂದ್ರ ಸಚಿವರು,ಶಾಸಕರು,ಪಾಲಿಕೆ ಸದಸ್ಯರುಹಾಗೂ ಎಲ್ಲ ಗಣೇಶನ ಭಕ್ತಾಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವೆ.
ಈರೇಶ ಅಂಚಟಗೇರಿ,
ಮಾಜಿ ಮಹಾಪೌರರು
ಹೈಕೋರ್ಟ್ ಅಂಜುಮನ್ ಸಲ್ಲಿಸಿದ್ದ ಮನವಿಯನ್ನು ಇಂದು ತಿರಸ್ಕರಿಸಿದ್ದು ಗಣೇಶ ಸ್ಥಾಪನೆಗೆ ಯಾವುದೇ ಅಡ್ಡಿಯಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ.ಅದ್ಧೂರಿಯಾಗಿ ಕಳೆದ ಬಾರಿಯಂತೆ ಗಣೇಶೋತ್ಸವ ಆಚರಿಸಲಾಗುವುದು
ಸಂಜು ಬಡಸ್ಕರ, ಅಧ್ಯಕ್ಷರು
ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳ