ಹುಬ್ಬಳ್ಳಿ-ಧಾರವಾಡ ಸುದ್ದಿ

ಪಂಚಮಸಾಲಿ ಹೋರಾಟ ಮತ್ತೆ ಆರಂಭ

ಇಷ್ಟಲಿಂಗ ಪೂಜೆ ಮೂಲಕ ಹಕ್ಕೊತ್ತಾಯ

ಉಭಯ ಸರ್ಕಾರಗಳಿಗೂ ಖಡಕ್ ಎಚ್ಚರಿಕೆ

ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಹೋರಾಟ ಇಷ್ಟಲಿಂಗ ಪೂಜೆಯ ಮೂಲಕ ಇಂದು ಪುನರಾರಂಭಗೊಂಡಿದೆ.


ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಅವರು ಇಲ್ಲಿನ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಲ್ಲಿಂದ ಬಂಕಾಪುರ ಚೌಕ್ ವರೆಗೆ ಬೈಕ್ ರ್‍ಯಾಲಿ ನಂತರ ಗಬ್ಬೂರು ವೃತ್ತದವರೆಗೂ ಪಾದಯಾತ್ರೆ ಮೂಲಕ ತೆರಳಿ ಅಲ್ಲಿ ಇಷ್ಟಲಿಂಗ ಪೂಜೆ ಮೂಲಕ ಮೀಸಲಾತಿಗೆ ಹಕ್ಕೊತ್ತಾಯ ಮಾಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಆಯಾ ಜಿಲ್ಲಾ ಮಟ್ಟದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹಕ್ಕೊತ್ತಾಯ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಹೋರಾಟ ನಡೆಯಲಿದೆ. ಸಮಾಜದ ಬೇಡಿಕೆ ಈಡೇರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿ ಪಡೆದೆ ತೀರಲು ಸಮಾಜ ನಿರ್ಧರಿಸಿದೆ. ಹಿಂದಿನ ಸರಕಾರ ಜಾರಿಗೆ ತಂದಿರುವ ಮೀಸಲಾತಿ ಅನುಷ್ಠಾನ ಆಗಿಲ್ಲ. ಈ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮುಗಿಯುವುದರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.


ಮೀಸಲಾತಿಗಾಗಿ ಇಷ್ಟು ಹೋರಾಟ ಮಾಡಿದರೂ ಸರ್ಕಾರ ಸೌಜನ್ಯ ಕ್ಕಾದರೂ ನಮ್ಮನ್ನು ಕರೆದು ಮಾತನಾಡಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನಿಮ್ಮ ಬೆನ್ನಿಗೆ ಸಮಾಜ ನಿಂತಿದೆ ಎಂಬುದನ್ನು ಮರೆಯಬಾರದು.ಲಿಂಗಾಯತ ಪಂಚಮಸಾಲಿ ಸಮಾಜವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೆಲ ದುಷ್ಟ ಮನಸ್ಸುಗಳು ನಮಗೆ ಮೀಸಲಾತಿ ಸಿಗದಂತೆ ತಡೆ ಹಿಡಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಡಿಕೆ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ಹಾಗೂ ಲಿಂಗಾಯತ ಉಪಜಾತಿಗಳ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಸಮಾಜಕ್ಕೆ ಯಾವ ಪಕ್ಷ ಮಾನ್ಯತೆ ನೀಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ. ನ್ಯಾಯ ಒದಗಿಸುವವರ ವಿರುದ್ಧ ಅಸಮಾಧಾನಗೊಳ್ಳುವುದು ನಮ್ಮ ಸಮಾಜಕ್ಕೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.


ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ, ಮಾಜಿ ಶಾಸಕರ ಎಸ್.ಐ.ಚಿಕ್ಕನಗೌಡ್ರ, ಜಿಲ್ಲಾಧ್ಯಕ್ಷ ನಿಂಗಣ್ಣ ಕರಿಕಟ್ಟಿ, ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸಮಾಜದ ಮುಖಂಡರಾದ ವೀರೇಶ ಉಂಡಿ, ರಾಜಶೇಖರ ಮೆಣಸಿನಕಾಯಿ, ಷಣ್ಮುಖ ಗುರಿಕಾರ,ದೀಪಾ ಗೌರಿ, ಬಾಪುಗೌಡ, ಸಿದ್ದು ಹಂಡೇದ, ಸಮಾಜ ಸೇವಕ ರಾಜು ಕೊಟಗಿ, ಶಶಿ ಶೇಖರ ಡಂಗನವರ, ಶಂಕರ ಮಲಕಣ್ಣವರ, ವೀರಣ್ಣ ನೀರಲಗಿ, ರವಿರಾಜ ಕೊಡ್ಲಿ, ಸಂಗೀತಾ ಇಜಾರದ ಜಿ.ಜಿ.ದ್ಯಾವನಗೌಡ್ರ, ಸತೀಶ ನೂಲ್ವಿ, ಸುವರ್ಣಲತಾ ಗದಿಗೆಪ್ಪಗೌಡರ ಸೇರಿದಂತೆ ಸಾವಿರಾರು ಸಮಾಜ ಬಾಂಧವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *