15ದಿನದೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಪ್ರಧಾನಿಗೆ ದೂರು: ಅರವಿಂದ ಏಗನಗೌಡರ
ಧಾರವಾಡ: ಈ ಬಾರಿ ಸೋಲಿನ ಹತಾಶೆಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರನ್ನು ಸಾರ್ವಜನಿಕರ ಎದುರು ಮನಬಂದಂತೆ ಮಾತನಾಡಿ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿರುವುದು ಅವರ ಯೋಗ್ಯತೆಗೆ ತಕ್ಕುದಲ್ಲ ಎಂದರು.
ಸರಕಾರಿ ಸೇವೆಯಲ್ಲಿರುವ ಅದರಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಕಾನೂನು ಮತ್ತು ಶಾಂತಿ ಪರಿಪಾಲನೆ ಮಾಡುವರನ್ನು ಅವಮಾನಿಸುವುದು ರಾಜಕಾರಣಿಯ ಸೂಕ್ತ ವರ್ತನೆಯಲ್ಲ. ಅಧಿಕಾರಿ ತಪ್ಪು ಮಾಡಿದ್ದರೆ ಸೂಕ್ತ ಮತ್ತು ನಿಯಮಾವಳಿ ಪ್ರಕಾರ ಮಾತನಾಡಬಹುದಿತ್ತು. ಆದರೆ ಸಚಿವ ಜೋಶಿ ಅವರ ವರ್ತನೆ ಸರಿಯಲ್ಲ. ಹದಿನೈದು ದಿನಗಳೊಳಗೆ ಸಾರ್ವಜನಿಕವಾಗಿ ಸಚಿವರು ಕ್ಷಮೆ ಕೇಳಬೇಕು. ಒಂದು ವೇಳೆ ಸಚಿವರು ಇದೇ ರೀತಿ ಮುಂದುವರೆದರೆ ಪತ್ರ ಚಳವಳಿ ಮೂಲಕ ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಇತ್ತೀಚೆಗೆ ಪೊಲೀಸರ ಮೇಲೆ ನಡೆದ ಹಲ್ಲೆಗೂ ಸಚಿವ ಜೋಶಿಯವರ ವರ್ತನೆಯೇ ಪ್ರೇರಣೆಯಾಗಿದೆ. ಓರ್ವ ಜನಪ್ರತಿನಿಧಿಯ ನಡೆ ಉತ್ತಮ ಕಾರ್ಯಗಳಿಗೆ ಮಾದರಿಯಾಗಬೇಕು. ನರೇಂದ್ರದಲ್ಲಿ ಹಲ್ಲೆ ಮಾಡಿದವರು ಕೂಡ ಬಿಜೆಪಿಯವರೇ. ಆದ್ದರಿಂದ ಜೋಶಿಯವರ ಪರೋಕ್ಷ ಬೆಂಬಲ ನರೇಂದ್ರದಲ್ಲಿನ ಹಲ್ಲೆ ಕೋರರಿಗೆ ಇದ್ದಿರಬಹುದು ಎಂದು ಛೇಡಿಸಿದರು.
ಮುಖಂಡರಾದ ಚನಬಸಪ್ಪ ಮಟ್ಟಿ, ಮಡಿವಾಳಪ್ಪ ಉಳವಣ್ಣವರ, ಪರಮೇಶ್ವರ ಕಾಳೆ, ಮಂಜುನಾಥ ಸಂಕಣ್ಣವರ, ಮಂಜುನಾಥ ಮಸೂತಿ, ನಿಂಗಪ್ಪ ಮೊರಬದ, ದೀಪಾ ನೀರಲಕಟ್ಟಿ, ನವೀನ ಕದಂ, ಮೈಲಾರಗೌಡ ಪಾಟೀಲ, ಭೀಮಪ್ಪ ಕಾಸಾಯಿ, ಮಡಿವಾಳಗೌಡ ಪಾಟೀಲ, ಸಂತೋಷ ನೀರಲಕಟ್ಟಿ. ಸುದ್ದಿಗೋಷ್ಠಿಯಲ್ಲಿದ್ದರು.