ಹುಬ್ಬಳ್ಳಿ-ಧಾರವಾಡ ಸುದ್ದಿ

ಅನಧಿಕೃತ ’ಸ್ಮೋಕ್ ಝೋನ್’ ಆದ ಧಾರವಾಡ ತಹಶೀಲ್ದಾರ ಕಚೇರಿ ಪ್ರದೇಶ!

ಶಾಸಕರಿಬ್ಬರ ಕಚೇರಿ ಇದ್ದರು ಲೆಕ್ಕಕ್ಕಿಲ್ಲ; ಸಾರ್ವಜನಿಕರು ನಿಲ್ಲಲಾರದ ಸ್ಥಿತಿ

ಧಾರವಾಡ: ಇಲ್ಲಿನ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ತಹಸೀಲ್ದಾರ ಕಚೇರಿ ಬಳಿ ಸಾರ್ವಜನಿಕರು ನಿಲ್ಲಲಾರದ ಪರಿಸ್ಥಿತಿ ನಿರ್ಮಾಣ ಆಗಿದೆ.
ತಹಶಿಲ್ದಾರ ಕಚೇರಿ ಮುಂಭಾಗದಲ್ಲಿಯೇ ತಾಲ್ಲೂಕು ಪಂಚಾಯತ ಕಚೇರಿ ಕೂಡ ಇದೆ. ಈ ಕಚೇರಿಗಳ ಅಕ್ಕಪಕ್ಕದಲ್ಲಿ ಹೊಟೆಲ್, ಝರಾಕ್ಸ್, ಪುಸ್ತಕ, ಪಾನ ಶಾಪ್ ಇನ್ನಿತರ ಮಳಿಗೆಗಳಿವೆ. ಇಷ್ಟು ಮಾತ್ರವಲ್ಲದೇ ಕೆಲವು ಅನಧೀಕೃತ ಡಬ್ಬಿ ಅಂಗಡಿಗಳು ಪ್ರತಿಷ್ಠಾಪನೆಗೊಂಡಿವೆ.


ನಿತ್ಯ ನೂರಾರು ಜನರು ತಮ್ಮ ಕೆಲಸಗಳ ನಿಮಿತ್ತ ಈ ಕಚೇರಿಗಳಿಗೆ ಬರುತ್ತಾರೆ. ಆದರೆ, ಇಲ್ಲಿನ ಅಂಗಡಿಗಳ ಹಿಂಭಾಗದಲ್ಲಿ ನಿಂತು ಧೂಮಪಾನ ಮಾಡುತ್ತ ಹರಟೆ ಹೊಡೆಯುವರಿಂದ ವಾತಾವರಣ ಹದಗೆಟ್ಟಿದೆ. ಅಂಗಡಿಗಳ ಮಾಲಕರು ತಮ್ನ ಲಾಭದ ಸಲುವಾಗಿ ಧೂಮಪಾನ ಪ್ರಿಯರಿಗೆ ಸ್ಥಳದ ಅನುಕೂಲ ಮಾಡಿಕೊಡುತ್ತಾರೆ.
ಇದರಿಂದ ಈ ಅಂಗಡಿಗಳ ಸುತ್ತಮುತ್ತ ಸಂಚರಿಸುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಆದರೆ, ಇಲ್ಲಿ ಸಿಗರೇಟು ಎಳೆಯುತ್ತ ಮಜಾ ಉಡಾಯಿಸುವ ಧೂಮಪಾನಿಗಳಿಗೆ ಯಾರ ಭಯವೂ ಇಲ್ಲ ದಂತಾಗಿದೆ.


ಇಂತಹ ಜನನಿಬಿಡ ಸ್ಥಳಗಳಲ್ಲಿ ಧೂಮಪಾನ ಮಾಡುವ ಜನರತ್ತ ಪೊಲೀಸರು ಕಣ್ಣು ಹಾಯಿಸಬೇಕಿದೆ. ಇಲ್ಲದಿದ್ದರೆ ಈ ಕಚೇರಿಗಳ ಆಸುಪಾಸು ಸಾರ್ವಜನಿಕರು ಕಿರಿಕಿರಿ ಅನುಭವಿಸುವುದು ಅನಿವಾರ್ಯ ಆಗಿದೆ. ಇದೇ ತಾಲೂಕು ಪಂಚಾಯತ ಕಚೇರಿಯ ಕಟ್ಟಡದಲ್ಲಿಯೇ ಸಚಿವ ಸಂತೋಷ ಲಾಡ್ ಮತ್ತು ಶಾಸಕ ವಿನಯ ಕುಲಕರ್ಣಿ ಅವರ ಕಚೇರಿಗಳಿವೆ. ಪ್ರಮುಖರ ಕಾರ್ಯ ನಿರ್ವಹಣೆಯ ಸ್ಥಳದಲ್ಲಿಯೇ ಅನಧಿಕೃತ ಸ್ಮೋಕ್ ಜೋನ್ ನಿರ್ಮಾಣ ಆಗಿದೆ.
ಸಾರ್ವಜನಿಕರ ಮೃದು ಮಾತಿಗೆ ಮಣಿಯದ ಧೂಮಪಾನ ಮಾಡುವರ ಕಡೆಗೆ ಪೊಲೀಸರು ತಮ್ಮ ವರಸೆ ತೋರಿಸಬೇಕಿದೆ. ಇಲ್ಲದಿದ್ದರೆ ಅವರಿಗೆ ಪೊಲೀಸರೇ ಪರೋಕ್ಷವಾಗಿ ನೆರವು ನೀಡಿದಂತಾಗುತ್ತದೆ.

administrator

Related Articles

Leave a Reply

Your email address will not be published. Required fields are marked *