ಕಾಂಗ್ರೆಸ್ ಪಕ್ಷದ ಮುಖಂಡರ ಆಕ್ರೋಶ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ಪಕ್ಷ ಮತ್ತು ವೀರಶೈವ ಲಿಂಗಾಯತ ಸಮಾಜಕ್ಕೆ ವಿಶ್ವಾಸ ದ್ರೋಹ ಬಗೆದಿದ್ದಾರೆ. ಸಿದ್ಧಾಂತ, ತತ್ವ ಧಿಕ್ಕರಿಸಿ ಬಿಜೆಪಿಗೆ ಹೋಗಿದ್ದಾರೆ. ಅವರೊಬ್ಬ ನೀತಿಗೆಟ್ಟ ರಾಜಕಾರಣಿಯಾಗಿದ್ದು, ಇಂಥವರ ಹಿಂದೆ ವೀರಶೈವ ಲಿಂಗಾಯತ ಸಮುದಾಯ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಬೆಂಬಲಿತ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಘೋಷಣೆ ಮಾಡಿದ್ದಾರೆ.
ರವಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡರಾದ ಮೋಹನ್ ಲಿಂಬಿಕಾಯಿ, ಶರಣಪ್ಪ ಕೊಟಗಿ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ, ಎಂ.ಎಸ್. ಅಕ್ಕಿ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಅನೇಕ ನಾಯಕರು ಶೆಟ್ಟರ ಅವರ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಶೆಟ್ಟರ ಅವರ ಹಿಂದೆ ವೀರಶೈವ ಲಿಂಗಾಯತ ಸಮಾಜ ಇಲ್ಲ. ಅವರ ಹಿಂದೆ ಜನರೂ ಇಲ್ಲ. ಜನಮನ್ನಣೆಯೂ ಇಲ್ಲ ಎಂಬುದು ಕಳೆದ ವಿಧಾನಸಭಾ ಚುನಾವಣೆ ಯಲ್ಲೇ ಸಾಬೀತಾಗಿದೆ. ೩೫ ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿಗೆ ಒಂದು ವೇಳೆ ತಾಕತ್ತು ಇದ್ದರೆ, ಜಗದೀಶ ಶೆಟ್ಟರ ಅವರ ಹಿಂದೆ ವೀರಶೈವ ಲಿಂಗಾಯತ ಸಮಾಜ ಇದೆ ಎಂದು ಭಾವಿಸಿದ್ದರೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಶೆಟ್ಟರ್‌ಗೆ ಕೊಟ್ಟು ನೋಡಲಿ. ನಮ್ಮ ಸಮಾಜದ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಅಧಿಕಾರದ ಲಾಲಸೆ, ಸ್ಥಾನಮಾನಕ್ಕಾಗಿ ಬಿಹಾರದ ಜೆಡಿಯು ನಾಯಕ ನಿತೀಶ್ ಕುಮಾರ್‌ರು ಏನನ್ನಾದರೂ ಮಾಡುತ್ತಾರೆ. ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಅವರಂತೆಯೇ ಜಗದೀಶ ಶೆಟ್ಟರ ಹುಬ್ಬಳ್ಳಿ-ಧಾರವಾಡದ ನಿತೀಶ್‌ಕುಮಾರ್ ಆಗಿದ್ದಾರೆ. ಸ್ವಾರ್ಥಕ್ಕಾಗಿ ಎಂತಹ ರಾಜಕಾರಣ ಮಾಡಲೂ ಸರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಲಿಂಬಿಕಾಯಿ ಕಿಡಿಕಾರಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಸಾಕಷ್ಟು ವಯಸ್ಸಾಗಿದೆ. ಹಾಗಾಗಿ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಬಾಯಿ ತಪ್ಪಿ ಹೇಳಿದ್ದಾರೆ. ವಯಸ್ಸಿನ ಕಾರಣಕ್ಕೆ ಮಾತನಾಡುವಾಗ ಏರುಪೇರಾಗಿದೆ ಅಷ್ಟೇ ಎಂದು ಮೋಹನ್ ಲಿಂಬಿಕಾಯಿ ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೊ ಗೊತ್ತಿಲ್ಲ. ಮೊದಲೇ ಅವರಿಗೆ ಬಹಳ ವಯಸ್ಸಾಗಿದೆ. ಮಾತನಾಡುವಾಗ ವ್ಯತ್ಯಾಸವಾಗುವುದು ಸಹಜ. ಇದೂ ಹಾಗೆಯೇ ಆಗಿರಬೇಕು. ಏನೇ ಇದ್ದರೂ ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷದ ಹೇಳಿಕೆಯಲ್ಲ ಎಂದರು.
ಶಾಮನೂರ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಅದೊಂದು ಜವಾಬ್ದಾರಿಯುತ ಸ್ಥಾನ. ಶಾಸಕರೂ ಆಗಿದ್ದಾರೆ. ಬಾಯಿ ತಪ್ಪಿ ಹೀಗೆ ಹೇಳಲು ಹೇಗೆ ಸಾಧ್ಯ. ಹಾಗಾದರೆ ಸಮಾಜದ ವಿಷಯದಲ್ಲಿ ಅವರು ತೆಗೆದು ಕೊಳ್ಳುವ ನಿರ್ಧಾರ, ನೀಡುವ ಹೇಳಿಕೆಗಳು ಹೀಗೆಯೇ ಇರುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಿಂಬಿಕಾಯಿಯವರು, ಹಾಗೇನಿಲ್ಲ. ಈ ಹೇಳಿಕೆ ವಿಷಯದಲ್ಲಿ ಹಾಗಾಗಿದೆ. ಬಾಯಿ ತಪ್ಪಿ ಈ ಮಾತು ಹೇಳಿದ್ದಾರೆ ಎಂದುಕೊಂಡು ಬಿಡಬೇಕಷ್ಟೇ ಎಂದರು.