ಬಿಜೆಪಿಗೆ ದಿ. 31ರವರೆಗೆ ಗಡುವು – ಏ.2ಕ್ಕೆ ಮುಂದಿನ ನಿರ್ಧಾರ
ಸಭೆಯ 12 ನಿರ್ಣಯದ ಸಮಗ್ರ ಮಾಹಿತಿ
ಹುಬ್ಬಳ್ಳಿ: ವರ್ತಮಾನದಲ್ಲಿ ನಡೆದಿರುವ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಇಲ್ಲಿನ ಮೂರುಸಾವಿರ ಮಠದಲ್ಲಿ ನಡೆದಿದ್ದ ಮಠಾಧಿಪತಿಗಳ ಚಿಂತನ ಮಂಥನ ಸಭೆ ಭಾರತೀಯ ಜನತಾ ಪಕ್ಷ ದಿ.31ರೊಳಗೆ ಧಾರವಾಡ ಲೋಕಸಭಾ ಕ್ಷೇತ್ರ ಅಭ್ಯರ್ಥಿಯೆಂದು ಘೋಷಿಸಿರುವ ಪ್ರಹ್ಲಾದ ಜೋಶಿಯವರನ್ನು ಬದಲಿಸಲು ಹಕ್ಕೊತ್ತಾಯ ಮಂಡಿಸಿದೆ.
ನಗರದಲ್ಲಿಂದು ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ನೂರಾರು ಮಠಾಧಿಪತಿಗಳು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಸಭೆಯ ನಂತರ ಈ ವಿಷಯವನ್ನು ಮಾಧ್ಯಮದವರಿಗೆ ನೀಡಲಾಯಿತು.
ವೀರಶೈವ ಲಿಂಗಾಯತ ಧಾರ್ಮಿಕ ಅವನತಿ ಆಗುತ್ತಿದೆ ಎಂಬ ವಿಚಾರ ಕುರಿತು, ಸಾಮಾಜಿಕವಾಗಿ ಒಳಪಂಗಡಗಳು ಪರಿಣಾಮ, ಸಮಾಜದ ನಾಯಕರಿಗೆ ಪೆಟ್ಟು ಬಿದ್ದಾಗ ಮಠಾಧೀಪತಿಗಳು ಮಾತನಾಡಬೇಕು. ಉತ್ತರ ಭಾರತದಲ್ಲಿ ಸಾಧು ಸನ್ಯಾಸಿಗಳು ರಾಜಕಾರಣ ಮಾಡುತ್ತಾರೆ. ದಕ್ಷಿಣ ಭಾರತ ಮಾಡುತ್ತಿಲ್ಲ. ನಾವು ಸಹ ಚುನಾವಣೆ ನಿಲ್ಲಬೇಕೋ ಬೇಡವೋ ಎಂಬ ಚರ್ಚೆ ಆಗಿ ಅನಿವಾರ್ಯವಾಗಿ ಮಠಾಧಿಪತಿಗಳು ಸೇರಿ ಸರ್ವಾನುಮತದ ತೀರ್ಮಾನ ಮಾಡಲಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಬಹುಸಂಖ್ಯಾತ ಲಿಂಗಾಯತ ನಾಯಕರು ತುಳಿತಕ್ಕೊಳಗಾಗಿದ್ದಾರೆ. ಮಹಿಳಾ ಜನಪ್ರತಿನಿಧಿಗಳು ಅವಮಾನಕ್ಕೆ ಒಳಗಾಗಿದ್ದಾರೆ. ಪ್ರಹ್ಲಾದ ಜೋಶಿಯವರಿಂದ ವೀರಶೈವ ಲಿಂಗಾಯತ ನಾಯಕರಿಗೆ ಅನ್ಯಾಯವಾಗಿದ್ದು, ಲಿಂಗಾಯತರಿಂದ ಆರಿಸಿ ಬಂದಿರುವ ಇವರು ಲಿಂಗಾಯತ ನಾಯಕ ಬೇಕು ಎಂಬ ಹಿನ್ನೆಲೆಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಗಿದ್ದು, ನಮ್ಮ ಸಮಾಜದ ಮೇಲೆ ಚುನಾವಣೆ ಬಂದಾಗ ಮಾತ್ರ ಇವರಿಗೆ ಪ್ರೀತಿ ಯಾಕೆ ಬರುತ್ತದೆ ಎಂದು ಪ್ರಶ್ನಿಸಿದರು. ಇವರಿಗೆ ಅಧಿಕಾರದ ಮದ ಬಂದಿದೆ.
ಧಾರವಾಡ ಮತ ಕ್ಷೇತ್ರದಿಂದ ಜೋಶಿಯವರನ್ನು ದಿ. 31ರೊಳಗೆ ಬದಲಾವಣೆ ಮಾಡದಿದ್ದಲ್ಲಿ ಏ.2 ರಂದು ಮಠಾಧಿಪತಿಗಳು ಮತ್ತೆ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುವರೆಂದರು.
ಸವಣೂರ ಕಲ್ಮಠದ ಚನ್ನಬಸವ ಸ್ವಾಮೀಜಿ, ಸದಾಶಿವಪೇಟದ ಗದಿಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿಶ್ವರ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗ ದೇವರು, ಸಂಗನಬಸವ ದೇವರು ಶಿವಲಿಂಗಸ್ವಾಮಿ ಮಂಟೂರ, ಚನ್ನಬಸವೇಶ್ವರ ಸ್ವಾಮೀಜಿ ಸವಣೂರು ಸೇರಿದಂತೆ ನಾಡಿನ ಮೂಲೆ ಮೂಲೆಯಿಂದ ಸ್ವಾಮೀಜಿ ಆಗಮಿಸಿದ್ದರು.
ಸಭೆಯ ನಿರ್ಣಯಗಳು:
- ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕೇ ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು.
- ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆಯಾಗಿದೆ. ಅದನ್ನು ಬದಲಾವಣೆ ಮಾಡಬೇಕು-ಬೇರೆ ಕ್ಷೇತ್ರಕ್ಕೆ ಅಥವಾ ಪಕ್ಷದ ಕೆಲಸಕ್ಕೇ ಬಳಸಬೇಕು.
- ಇಲ್ಲಿಯ ಮಾಜಿ ಸಿಎಂಗೆ ಬೇರೆ ಕ್ಷೇತ್ರ ಕೊಟ್ಟಂತೆ ಮತ್ತು ೪ ಸಾರೆ ಲಿಂಗಾಯತರು ಇವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆ ಉಪಕಾರಕ್ಕೆ ಕ್ಷೇತ್ರ ತ್ಯಾಗ ಮಾಡಲಿ ಹಾಗೂ ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಲಿ. ಆರಿಸಿ ತರಲಿ.
- ಬದಲಾವಣೆಗೆ ಕಾರಣ ಬಹುಸಂಖ್ಯಾತ ಲಿಂಗಾಯತ ಹಾಗೂ ಇತರ ಸಮಾಜದ ನಾಯಕರನ್ನು ನೌಕರ, ವ್ಯಾಪಾರಿ, ಸ್ವಾಮಿಗಳು ಇವರಿಂದ ತುಳಿತಕ್ಕೊಳಗಾಗಿದ್ದಾರೆ.
- ಇವರ ಸೇಡಿನ ರಾಜಕಾರಣದಿಂದ ನಮ್ಮ ಬಹಳ ನಾಯಕರು ಜಾತ್ಯಾತೀತವಾಗಿ ತುಳಿತಕ್ಕೆ ಒಳಗಾಗಿದ್ದಾರೆ, ದುರ್ಬಲರಾಗಿದ್ದಾರೆ. ಮಾನಸಿಕ, ದೈಹಿಕ, ಆರ್ಥಿಕ, ರಾಜಕೀಯವಾಗಿ ಕುಸಿದು ಬಿಟ್ಟಿದ್ದಾರೆ. ಮಹಿಳಾ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ.
- ಐಟಿ-ಇಡಿ ಇತರ ದಾಳಿಯ ದಾಳ ಮತ್ತು ಭಯ ಉಂಟು ಮಾಡಿ ಬಾಯಿಬಿಟ್ಟು ಮಾತಾಡದ ಹಾಗೆ ಮಾಡಿದ್ದರಿಂದ ಸ್ವಾತಂತ್ರ್ಯ ಹೀನರಾಗಿ ದಾಸ್ಯತ್ವದಲ್ಲಿ ಬದುಕಿದ್ದಾರೆ.
- ಸರ್ಕಾರಿ, ಅರೇ ಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ತಮ್ಮ ಹಿಂಬಾಲಕರನ್ನು ಸೇರಿಸಿ ಪ್ರಾಮಾಣಿಕರನ್ನು ನಾಶ ಮಾಡಿದ್ದಾರೆ.
- ಮಾಜಿ ಸಿಎಂ ಮರಳಿ ಪಕ್ಷಕ್ಕೆ ಹೋದಾಗ ಶುಭಾಶಯಗಳನ್ನು ಹೇಳಲಿಕ್ಕೆ ಮನಸ್ಸಿದ್ದರೂ ಪ್ರೀತಿ ಇದ್ದರೂ ಇವರ ಭಯಕ್ಕೆ ಯಾರೂ ಅವರ ಮನೆಗೆ ಹೋಗದ ಹಾಗೆ ವಾತಾವರಣವನ್ನು ಸೃಷ್ಟಿ ಮಾಡಿರುತ್ತಾರೆ.
- ನಾವು ಕೆಲಸದ ನಿಮಿತ್ತ ಫೋನ್ ಮಾಡಿದಾಗ ನಿಮ್ಮ ಸಮಾಜದ ನಾಯಕರಿಲ್ಲವೆ ಎಂದು ಕೇಳಿದ ಪರಿಣಾಮ ಅವರಿಂದ ದೂರವಾಗಿ ೩ ವರ್ಷವಾಯಿತು. ನಮ್ಮ ಭೇಟಿಗೆ ಅವಕಾಶ ನೀಡಿಲ್ಲ. ಸಭೆಗಳಲ್ಲಿ ಮಾತಾಡಿಸಿಲ್ಲ. ಸ್ವಾಮೀಜಿ ವಿರೋಧ ಬೇಡ ಎಂದು ಅವರ ಸಹೋದರರಿಗೆ ಸಲಹೆ ಕೊಟ್ಟರೆ ಅಂತಹ ಸ್ವಾಮಿಗಳು ನಮ್ಮ ಮನೆ ಮುಂದೆ ಪ್ರತಿದಿನವೂ ನೂರು ಜನ ತಿರುಗಾಡುತ್ತಾರೆ ಅಂದಿದ್ದಾರೆ.
- ಕಲಘಟಗಿ ಪಕ್ಷದ ಪ್ರಚಾರದ ಕಾರ್ಯಾಲಯ ಉದ್ಘಾಟನೆಗೆ ಸುಳ್ಳು ಹೇಳಿ ನಮ್ಮ ಸ್ವಾಮಿಗಳನ್ನು ಕರೆದು ತೇಜೋವಧೆ ಮಾಡಿದ್ದಾರೆ. ದುರುಪಯೋಗ ಪಡಿಸಿಕೊಂಡಿದ್ದಾರೆ. ತಮ್ಮ ಸಮಾಜದ ಸ್ವಾಮಿಗಳ ಹತ್ತಿರ ಹೋದಾಗ ನೆಲದ ಮೇಲೆ ಕೂಡ್ರುವ ಇವರು ನಮ್ಮ ಜಗದ್ಗುರುಗಳ ಹತ್ತಿರ ಮತ್ತು ಮಠಾಧಿಪತಿಗಳ ಮಧ್ಯೆ ಕುಳಿತು ಲಿಂಗಾಯತ ಸ್ವಾಮಿಗಳು ಅನ್ಯಪಕ್ಷದ ಮತ್ತು ಅಪಪ್ರಚಾರಕ್ಕೆ ಕಾರಣವಾಗಿದ್ದಾರೆ.
- ಬಹಳ ಜನ ಸ್ವಾಮಿಗಳನ್ನು ಮಗಳ ಮದುವೆಗೆ ಕರೆದು ಕನಿಷ್ಠ ರೀತಿ ನಡೆಸಿಕೊಂಡು ಭಿಕ್ಷುಕರಿಗೆ ಕೊಟ್ಟ ಹಾಗೆ ಕಾಣಿಕೆ ಕೊಟ್ಟಿದ್ದಾರೆ. ಶಿಷ್ಠಾಚಾರಕ್ಕೆ ಒಂದು ಕುರ್ಚಿ ಸಹಿತ ಇರಲಿಲ್ಲ.
- ನಾವು ಪಕ್ಷ ವಿರೋಧಿಗಳಲ್ಲ ವ್ಯಕ್ತಿಯ ವ್ಯಕ್ತಿತ್ವದ ವಿರೋಧಿಗಳು ಅದಕ್ಕೆ ಕಾರಣ ಅವರ ನಡೆ, ನುಡಿಗಳು ವ್ಯಷ್ಠಿ ಪ್ರಜ್ಞೆಗಿಂತ ಸಮಷ್ಠಿ ಪ್ರಜ್ಞೆ ನಮಗಿದೆ.