ಹುಬ್ಬಳ್ಳಿ-ಧಾರವಾಡ ಸುದ್ದಿ

ಜೋಶಿ ದಾಖಲೆ ಕಿರೀಟಕ್ಕೆ ’ಪಂಚರತ್ನ’: ವಿನೋದಗೆ ವಿರೋಚಿತ ಸೋಲು

ಕೇಸರಿ ಪಡೆಗೆ ಅಂತರದ್ದೇ ಚಿಂತೆ – ಕೈ ಪಾಲಿಗೆ ಕಗ್ಗಂಟಾದ ಕಲಘಟಗಿ, ಧಾರವಾಡ ಗ್ರಾಮೀಣ

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಒಳಗೊಂಡ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ 97,324 ಅಂತರಗಳಿಂದ ಗೆಲ್ಲುವ ಮೂಲಕ ಸತತ ಐದನೇ ಬಾರಿಗೆ ಸಂಸತ್ತು ಪ್ರವೇಶಿಸಿ ಹೊಸ ಇತಿಹಾಸ ಬರೆದಿದ್ದಾರೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ’ಅಹಿಂದ’ ಸಮೀಕರಣ ಎಲ್ಲವನ್ನೂ ಮೀರಿ ಜೋಶಿಯವರ ಅಶ್ವಮೇಧದ ಕುದುರೆ ತನಗೆ ಸರಿಸಾಟಿಯಿಲ್ಲ ಎಂಬಂತೆ ಗೆಲವು ದಾಖಲಿಸುವ ಮೂಲಕ ಎಲ್ಲರ ಲೆಕ್ಕಾಚಾರ ತಲೆ ಕೆಳಗು ಮಾಡಿ ಕಮಲದ ಪಾಲಿಗೆ ಧಾರವಾಡ ಕ್ಷೇತ್ರ ಭದ್ರಕೋಟೆಯಾಗಿಯೇ ಉಳಿದರೂ ಗೆಲವಿನ ಅಂತರ ಲಕ್ಷವನ್ನೂ ದಾಟದಿರುವುದು ನಿಜಕ್ಕೂ ಕೇಸರಿ ಪಡೆಯ ಚಿಂತೆಗೆ ಕಾರಣವಾಗಿದೆ.


ಚುನಾವಣೆ ಘೋಷಣೆ ಆಗುವವರೆಗೆ ಕ್ಷೇತ್ರದ ಬಹುತೇಕರಿಗೆ ಕಾಂಗ್ರೆಸ್ ಉಮೇದುವಾರರಾಗಿದ್ದ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಹೆಸರೇ ಕೇಳಿಲ್ಲವಾಗಿತ್ತು. ಆದರೆ ಅಖಾಡಕ್ಕಿಳಿದ ಎರಡು ತಿಂಗಳಲ್ಲಿ 20 ವರ್ಷ ಕಾಲ ಕ್ಷೇತ್ರ ಪ್ರತಿನಿಧಿಸಿದ್ದಲ್ಲದೇ ಪ್ರತಿ ಕ್ಷೇತ್ರದಲ್ಲೂ ತಮ್ಮದೇ ಪಡೆ ಹೊಂದಿರುವ ಅಲ್ಲದೇ ಅಭಿವೃದ್ಧಿ ವಿಚಾರದಲ್ಲಿ ಮಾದರಿಯಾಗೇ ಕಾರ್ಯ ನಿರ್ವಹಿಸಿರುವ ಜೋಶಿಯವರು ಮೊದಲ ಬಾರಿ ಏದುಸಿರು ಬಿಡುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ. ಜೋಶಿಯವರ ತೆಕ್ಕೆಗೆ 7,16,231 ಮತಗಳು ಬಂದರೆ ಅಸೂಟಿ ಪಾಲಿಗೆ 6,18,907 ಮತಗಳು ಬಂದಿದೆ. ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಉಸ್ತುವಾರಿ ಸಚಿವ ಸಂತೋಷ ಲಾಡ್ ಎಲ್ಲ ಶಾಸಕರು, ಮುಖಂಡರ ದಂಡು ಕಟ್ಟಿಕೊಂಡು ’ಮಯೂg’ದಲ್ಲಿ ಮಾಡಿದ ತಂತ್ರಗಾರಿಕೆ ಫಲ ನೀಡಿದೆಯಲ್ಲದೇ ಮತ ಗಳಿಕೆ ಹೆಚ್ಚಾಗಿದೆ. ಕಳೆದ ಚುನಾವಣೆಗಿಂತ ಬಿಜೆಪಿ 32 ಸಾವಿರ ಮತ ಪಡೆದಿದೆಯಾದರೂ ಕಾಂಗ್ರೆಸ್ ಈ ಬಾರಿ 1.39 ಲಕ್ಷ ಪಡೆದಿರುವುದು ಬಿಜೆಪಿಗೆ ಪಂಚ ಗ್ಯಾರಂಟಿ ಭಾರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮೊದಲ ಚುನಾವಣೆ 2004ರಲ್ಲಿ ಬಿ.ಎಸ್. ಪಾಟೀಲ ಎದುರು 83,074 ಮತಗಳ ಗೆಲುವಿನ ನಂತರ ಲಕ್ಷ, ಎರಡು ಲಕ್ಷದ ಲೆಕ್ಕದಲ್ಲೇ ಇದ್ದ ಅಂತರ ಮೊದಲ ಬಾರಿಗೆ ಲಕ್ಷದ ಕೆಳಗಿಳಿದಿದೆ.


ಅಸೂಟಿಗೆ ತವರು ಕ್ಷೇತ್ರ ನವಲಗುಂದ 17212 ಲೀಡ್ ತಂದರೆ, ಹುಬ್ಬಳ್ಳಿ ಧಾರವಾಡ ಪೂರ್ವ 26,776 ಮುನ್ನಡೆ ಕಲ್ಪಿಸಿದ್ದು, ಶಿಗ್ಗಾಂವಿಯಲ್ಲಿ ಸಹ 8598 ಲೀಡ್ ಬಂದಿದೆ. ಆದರೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕಲಘಟಗಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಪ್ರತಿನಿಧಿಸುವ ಗ್ರಾಮೀಣದಲ್ಲಿ ಮಾತ್ರ ಲೆಕ್ಕಾಚಾರ ಉಲ್ಟಾ ಆಗಿದೆ ಕ್ರಮವಾಗಿ 32,737 , 21336 ಲೀಡ್ ಬಿಜೆಪಿಗೆ ಬಂದಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಮುಖ ಹಿನ್ನೆಡೆಯಾಗಲು ಕಾರಣವಾಯಿತು. ಸೆಂಟ್ರಲ್‌ನಲ್ಲಿ 51326 ಹಾಗೂ ಪಶ್ಚಿಮದಲ್ಲಿ 41588 ಲೀಡ್ ಲೆಕ್ಕಾಚಾರ ನಿರೀಕ್ಷೆಯಂತೆಯೇ ಬಂದಿದೆ. ಕುಂದಗೋಳದಲ್ಲಿ ಕಾಂಗ್ರೆಸ್ ಮುನ್ನಡೆ ಗುಸು ಗುಸು ಇತ್ತಾದರೂ ಇವಿಎಂ ಒಡೆದಾಗ ಕೇವಲ 1660 ಅಲ್ಪ ಮುನ್ನಡೆ ಬಂದಿದ್ದು ಶಾಸಕ ಎಮ್.ಆರ್.ಪಾಟೀಲ ಸಹ ನಿಟ್ಟುಸಿರು ಬಿಡುವಂತಾಗಿದೆ. ಲಾಡ್ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮರಾಠಾ ಮತ ಬ್ಯಾಂಕ್ ಬ್ಯಾಂಕ್ ಕೈ ಹಿಡಿದಿಲ್ಲವಾಗಿದ್ದು , ಇನ್ನೊಂದೆಡೆ ಗ್ರಾಮೀಣದಲ್ಲಿ ವಿನಯ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ಸಿಗದೇ ಹೋದುದು ಕಮಲ ಪಾಲಿಗೆ ಅನುಕೂಲವಾಗಿದೆ. ಕಳೆದ ಬಾರಿ ಸಹ ಕಾಂಗ್ರೆಸ್‌ಗೆ ನವಲಗುಂದ ಮತ್ತು ಪೂರ್ವ ಲೀಡ್ ಕೊಟ್ಟಿದ್ದವು. ಆದರೆ ಈ ಬಾರಿ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪ್ರಾಭಲ್ಯದಲ್ಲೂ ಅಸೂಟಿಗೆ ೯೧೯೦೮ ಮತಗಳು ಬಂದಿದ್ದು ಅಲ್ಲಿನ ಎಲ್ಲ ನಾಯಕರ ಸಂಘಟಿತ ಯತ್ನವಾಗಿದೆ.


2009ರಲ್ಲಿ 4,46,786 ಮತ ಪಡೆದು ವಿಜಯಿಯಾದ ಜೋಶಿಯವರು 2014ರಲ್ಲಿ 5,45,395 ಮತ ಪಡೆದು ಗೆಲುವು ಸಾಧಿಸಿದ್ದರು.ಕಳೆದ ಬಾರಿ 2019ರಲ್ಲಿ 6,84,837  ಮತಗಳನ್ನು ಎರಡು ಲಕ್ಷಕ್ಕಿಂತ ಹೆಚ್ಚಿನ ಅಂತರದಲ್ಲಿ ನಾಲ್ಕನೇ ವಿಕ್ರಮ ಸಾಧಿಸಿದ್ದರು. ಧಾರವಾಡ ಕ್ಷೇತ್ರದ ಇತಿಹಾಸದಲ್ಲಿ ಈ ಬಾರಿ ಐದನೇ ಸಲ ಮೂರು ಲಕ್ಷಕ್ಕಿಂತ ಹೆಚ್ಚಿನ ಅಂತರದ ನಿರೀಕ್ಷೆ ಇತ್ತಾದರೂ ಏಳು ಲಕ್ಷಕ್ಕೂ ಹೆಚ್ಚು ಮತಗಳು ಬಂದರೂ ಲಕ್ಷದ ಗಡಿ ದಾಟುವುದು ಕಷ್ಟವಾಗಿ ಪರಿಣಮಿಸಿತು.

1994ರವರೆಗೆ ಕೈ ಭದ್ರಕೋಟೆಯೇ ಆಗಿದ್ದ ಕ್ಷೇತ್ರ ಸುಮಾರು ಮೂರು ದಶಕಗಳ ನಂತರ ಮತ್ತೆ ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಳವಾದರೂ ಇನ್ನೂ ಕ್ಷೇತ್ರದಲ್ಲಿ ಕೆಳ ಸ್ತರದಲ್ಲಿ ಹಸ್ತದ ಕಾರ್ಯಕರ್ತರ ದೊಡ್ಡ ಪಡೆ ಎಂಬುದು ಸಾಭೀತಾಗಿದ್ದು ಆದರೂ ಕಾಂಗ್ರೆಸ್ ನಾಯಕರು ಇನ್ನಷ್ಟು ಸಂಘಟಿತರಾಗಿದ್ದರೆ, ಗ್ಯಾರಂಟಿ ಫಲಾನುಭವಿಗಳನ್ನು ಮತಗಳಾಗಿ ಪರಿವರ್ತಿಸಿದಲ್ಲಿ ಗೆಲುವಿನ ಸನಿಹ ಹೋಗುವ ಸಾಧ್ಯತೆ ಇತ್ತು.

ಕ್ಷೇತ್ರದ ಜನತೆ ಕಾಂಗ್ರೆಸ್ಸಿಗರು ಸಾಕಷ್ಟು ನಕಾರಾತ್ಮಕ ವಿಚಾರ ಬಿತ್ತಿದರೂ ಕಳೆದ ನಾಲ್ಕು ಅವಧಿಯ ಪ್ರಾಮಾಣಿಕ ಕಾರ್ಯಕ್ಕೆ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದು ಇದಕ್ಕಾಗಿ ಮತ್ತೊಮ್ಮೆ ನನ್ನ ಕ್ಷೇತ್ರದ ಜನರಿಗೆ ಕೃತಜ್ಞತೆ ತಿಳಿಸುವೆ.


ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

 

ಮತ ನೀಡಿ ಆಶೀರ್ವದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ಸುಮಾರು ಒಂದು ಲಕ್ಷ ಮತದಿಂದ ಸೋತಿರಬಹುದು, ನಿಮ್ಮೆಲ್ಲರ ಪ್ರೀತಿ ನನ್ನನ್ನು ಗೆಲ್ಲಿಸಿದೆ. ಸೋಲು ,ಗೆಲುವು ಸಾಮಾನ್ಯ ಸದಾ ನಿಮ್ಮೊಂದಿಗೆ ಇರುವೆ. ಮತ್ತಷ್ಟು ಪ್ರಾಮಾಣಿಕವಾಗಿ ತಮ್ಮ ಸೇವೆ ಮಾಡುವೆ.

ವಿನೋದ ಅಸೂಟಿ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ

 

 

administrator

Related Articles

Leave a Reply

Your email address will not be published. Required fields are marked *