ಹುಬ್ಬಳ್ಳಿ-ಧಾರವಾಡ ಸುದ್ದಿ

23ನೇ ಮೇಯರ್ ಪಟ್ಟಕ್ಕೆ ನಾಲ್ವರ ಮಧ್ಯೆ ಪೈಪೋಟಿ

ರಾಮಣ್ಣ, ಬೀರಪ್ಪ,ಕೌಜಗೇರಿ,ತಿ ಪ್ಪಣ್ಣ ರೇಸ್‌ನಲ್ಲಿ

ಉಪ ಮೇಯರ್ : ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಜಿದ್ದಾ ಜಿದ್ದಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಚುನಾವಣೆ ದಿ.29ರ ಮುಹೂರ್ತ ನಿಗದಿಯಾಗಿದ್ದು ಕೇಸರಿ ಪಾಳೆಯದಲ್ಲಿ ಈ ಬಾರಿ ಯಾರಿಗೆ ಪಟ್ಟ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು ಎರಡೂ ಸ್ಥಾನಗಳಿಗೂ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾಗಿದೆ.
ಮೀಸಲಾತಿ ಅನ್ವಯ ಪ್ರಸ್ತುತ ಅವಧಿಗೆ ಮೇಯರ್ ಸ್ಥಾನ ಹಿಂದುಳಿದ ವರ್ಗ ’ಎ’ ಪುರುಷ ಅಭ್ಯರ್ಥಿಗೆ ನಿಗದಿಯಾಗಿದ್ದು ನಾಲ್ವರು ಹೆಸರು ಪ್ರಮುಖವಾಗಿ ಕೇಳಿ ಬರಲಾರಂಬಿಸಿದೆ.
ಪಶ್ಚಿಮ ಕ್ಷೇತ್ರದ ವ್ಯಾಪ್ತಿಗೆ ಬರುವ 30ನೇ ವಾರ್ಡಿನ ಸದಸ್ಯ ರಾಮಣ್ಣ ಬಡಿಗೇರ, ಹಾಲಿ ಮಹಾನಗರ ಬಿಜೆಪಿ ಅಧ್ಯಕ್ಷ 38ನೇ ವಾರ್ಡಿನ ಕಾರ್ಪೋರೇಟರ್ ತಿಪ್ಪಣ್ಣ ಮಜ್ಜಗಿ, 37ನೇ ವಾರ್ಡಿನ ಸದಸ್ಯ ಉಮೇಶ ಕೌಜಗೇರಿ ಹಾಗೂ 43ನೇ ವಾರ್ಡಿನ ಬೀರಪ್ಪ ಖಂಡೇಕರ ಇವರ ಮಧ್ಯೆ ಪೈಪೋಟಿಯಿದ್ದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಅಂತಿಮ ಸಿಗ್ನಲ್ ಗೌನ ಭಾಗ್ಯಕ್ಕೆ ಅವಕಾಶ ನೀಡಲಿದೆ.

ಬಿಜೆಪಿ ಬಲಗಾಲಿಟ್ಟ ನಂತರ ಎರಡು ಬಾರಿ ಪಾಲಿಕೆ ಪ್ರವೇಶಿಸಿರುವ ( ಒಟ್ಟೂ 4 ಬಾರಿ) ರಾಮಣ್ಣ ಬಡಿಗೇರ ಅವರಿಗೆ ಹಿರಿತನವಿದ್ದು ಎರಡು ಬಾರಿ ಹೆಸರು ಮುನ್ನೆಲೆಗೆ ಬಂದು ವಂಚಿತರಾಗಿದ್ದು ಈ ಬಾರಿ ಶತಾಯ ಗತಾಯ ಮೇಯರ್ ಕುರ್ಚಿಯಲ್ಲಿ ಕೂಡ್ರಲೇ ಬೇಕೆಂಬ ಲೆಕ್ಕಾಚಾರದಿಂದ ಯತ್ನ ನಡೆಸಿದ್ದಾರೆ.
ಕುರುಬ ಸಮುದಾಯಕ್ಕೆ ಪ್ರಥಮ ಪ್ರಜೆ ಅವಕಾಶ ಸಿಕ್ಕಿಲ್ಲ ಎಂಬ ಕಾರ್ಡ ಮುಂದಿಟ್ಟು ಮೂರು ಬಾರಿ ಪಾಲಿಕೆಗೆ ಆಯ್ಕೆಯಾಗಿರುವ ಬೀರಪ್ಪ ಖಂಡೇಕರ ಸಹ ಮುಖಂಡರುಗಳ ಮೂಲಕ ಭಾರೀ ಒತ್ತಡ ಹೇರಿದ್ದಾರೆ.


ಉಣಕಲ್ ಪ್ರದೇಶದ 37ನೇ ವಾರ್ಡಿನ ಉಮೇಶಗೌಡ ಕೌಜಗೇರಿ ಇನ್ನೋರ್ವ ಪ್ರಭಲ ಆಕಾಂಕ್ಷಿಯಾಗಿದ್ದು ಎರಡು ಬಾರಿ ಗೆದ್ದಿರುವ ಇವರು ತಮ್ಮ ಸಾಧನೆ ಮುಂದಿಟ್ಟು ಈ ಬಾರಿ ಅವಕಾಶ ನೀಡಲೇ ಬೇಕೆಂದು ವರಿಷ್ಠರಿಗೆ ಹೇಳಿದ್ದಾರೆ. ಇನ್ನೊಂದೆಡೆ ತಿಪ್ಪಣ್ಣ ಮಜ್ಜಗಿ ಅವರಿಗೆ ಮಹಾನಗರ ಅಧ್ಯಕ್ಷ ಸ್ಥಾನದ ಮಹತ್ವದ ಜವಾಬ್ದಾರಿಯಿರುವ ಕಾರಣ ಅವರನ್ನು ಮೇಯರ್ ಪಟ್ಟಕ್ಕೆ ಬಿಜೆಪಿ ಮುಖಂಡರು ಪರಿಗಣಿಸುವರೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.
ಈ ಬಾರಿ ಕುರುಬ ಸಮುದಾಯದವರಿಗೆ ಮೇಯರ್ ಪಟ್ಟ ನೀಡಲೇ ಬೇಕೆಂದು ಸ್ಥಳೀಯ ನಾಯಕರಿಗೆ ಅನೇಕ ರಾಜ್ಯಮಟ್ಟದ ನಾಯಕರು, ಮಠಾಧೀಶರು ಒತ್ತಡ ಹೇರಿದ್ದಾರಲ್ಲದೇ
ಕಳೆದ ಬಾರಿಯಂತೆ ಅಂತಿಮ ಕ್ಷಣದಲ್ಲಿ ಪವಾಡ ನಡೆದಲ್ಲಿ ಈ ನಾಲ್ವರಲ್ಲಿ ಯಾರೂ ಮೇಯರ್ ಪಟ್ಟ ಏರಬಹುದಾಗಿದ್ದು ಪ್ರಸಕ್ತ ಸೆಂಟ್ರಲ್ ಕ್ಷೇತ್ರಕ್ಕೆ ದೊರೆತಿರುವ ಹಿನ್ನೆಲೆಯಲ್ಲಿ ಪಶ್ಚಿಮದ ಪಾಲಾಗಬಹುದು ಎಂಬ ಮಾತು ಕೇಳಿ ಬರುತ್ತಿದ್ದು ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರೂ ರಾಮಣ್ಣ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.


ರಾಮಣ್ಣ ಅವರು ಮೂಲತಃ ಹಾವೇರಿ ಕ್ಷೇತ್ರದ ಹಾಲಿ ಸಂಸದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಕ್ಯಾಂಪನಿಂದಲೇ ಬಂದಿದ್ದು,ನಿಕಟವರ್ತಿ ಆಗಿರುವ ಹಿನ್ನೆಲೆಯಲ್ಲಿ ಅವರೂ ಒತ್ತಡ ಹೇರುವ ಸಾಧ್ಯತೆಗಳಿವೆ. ದಿ. 28ಕ್ಕೆ ಮೇಯರ್ ಆಯ್ಕೆ ವಿಚಾರದಲ್ಲಿ ಕಾರ್ಪೋರೇಟರ್‌ಗಳ ಸಭೆ ನಡೆಯುವ ಸಾಧ್ಯತೆ ಇದ್ದು ಅಲ್ಲಿ ಅಭಿಪ್ರಾಯ ಸಂಗ್ರಹಿಸಿ 29ರ ಬೆಳಿಗ್ಗೆಯೆ ಅಧಿಕೃತವಾಗಿ ಘೋಷಣೆಯಾಗಲಿದೆ.ಕೇಂದ್ರ ಸಚಿವ ಜೋಶಿಯವರು ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್ ಮುಂತಾದವರ ಅಭಿಪ್ರಾಯ ಆಲಿಸಿ ಅಂತಿಮಗೊಳಿಸುವ ಸಾಧ್ಯತೆಯಿದೆ.

ಪರಿಶಿಷ್ಟ ಜಾತಿ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಿದ್ದು ಪಕ್ಷೇತರರಾಗಿ ಗೆದ್ದು ಕಮಲ ಮುಡಿದಿರುವ ದುರ್ಗಮ್ಮ ಶಶಿಕಾಂತ ಬಿಜವಾಡ(69) ಹಾಗೂ ಚಂದ್ರಿಕಾ ವೆಂಕಟೇಶ ಮೇಸ್ತ್ರಿ( 56) ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಯಿದೆ. ಈ ಅವಧಿಯ ಮೊದಲ ಮೇಯರ್ ಆಯ್ಕೆ ಸಂದರ್ಭದಲ್ಲೇ ಬಿಜೆಪಿ ಜತೆ ಗುರುತಿಸಿಕೊಂಡ ದುರ್ಗಮ್ಮ ಬಿಜವಾಡ ಅವರಿಗೆ ಬಿಜೆಪಿ ಸ್ಥಾನಮಾನ ನೀಡುವ ಭರವಸೆ ಮೇಲೆಯೇ ಸೆಳೆದಿದ್ದು ಆ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುವುದೆಂಬ ಮಾತುಗಳು ಕೇಳಿ ಬರುತ್ತಿವೆ.


ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಸಹ ಪತ್ನಿಗೆ ಪಟ್ಟ ಕಟ್ಟಲು ಯತ್ನ ನಡೆಸಿದ್ದು ಅಂತಿಮವಾಗಿ ವರಿಷ್ಠರ ನಿರ್ಧಾರದ ಮೇಲೆ ಅವಲಂಬಿಸಿದೆ. 82 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಮಂದಿ ಪಕ್ಷೇತರ ಹಾಗೂ ಒಬ್ಬ ಜೆಡಿಎಸ್ ಸದಸ್ಯರಿದ್ದಾರೆ. ಕಳೆದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಬಜೆಪಿಯ ಸದಸ್ಯ ಬಲ 38 ಆಗಿದೆ.ಅಲ್ಲದೇ ಬಿಜೆಪಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಐವರು ಶಾಸಕರು, ಒರ್ವ ಸಂಸದರ ಮತ ಸಹ ಧಕ್ಕಲಿದ್ದು, ಕಾಂಗ್ರೆಸ್ಸಿಗೆ ಶಾಸಕರಾದ ಅಬ್ಬಯ್ಯ, ವಿನಯ ಕುಲಕರ್ಣಿ ಮತ ದೊರೆಯಲಿದೆ.

ಕಮಲದ ಇಮೇಜಿಗೆ ಕಪ್ಪು ಚುಕ್ಕೆ 

22ನೆ ಮೆಯರ್ ಆಗಿ ವೀಣಾ ಬರದ್ವಾಡ ಹಾಗು ಉಪ ಮೇಯರ್ ಆಗಿ ಸತೀಶ ಹಾನಗಲ್ ಅಧಿಕಾರ ವಹಿಸಿಕೊಂಡ ನಂತರ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸರ್ವ ಸದಸ್ಯರ ಮಾಸಿಕ ಸಭೆಯೂ ಪೂರ್ಣ ಪ್ರಮಾಣದಲ್ಲಿ ಆಗದಿರುವುದು ನಿಜಕ್ಕೂ ಕೇಸರಿ ಪಡೆಯ ಇಮೇಜಿಗೆ ಧಕ್ಕೆಯುಂಟು ಮಾಡಿದೆ. ಅಲ್ಲದೇ ಬಿಜೆಪಿಯ ಕೆಲ ಹಿರಿಯ ಸದಸ್ಯರೇ ಪಾಲಿಕೆಯ ಅಂಗಳಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಮೇಯರ್ ಅವರ ವಿಚಾರ ಒಮ್ಮೆ ಕೋರ್ ಕಮೀಟಿಯಲ್ಲಿ ಸದ್ದು ಮಾಡಿ ಎಚ್ಚರಿಕೆ ನೀಡಿದರೂ ಯಾವುದೇ ಸುಧಾರಣೆ ಕಂಡು ಬಂದೇ ಇಲ್ಲ. ಲೋಕಸಭಾ ನೀತಿ ಸಂಹಿತೆ ಸುಮಾರು ಮೂರು ತಿಂಗಳ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾದರೆ ಆಡಳಿತ ಪಕ್ಷದವರಿಗೆ ಇರಿಸು ಮುರಿಸಾಗುವ ಹಲವು ಘಟನೆಗಳು ನಡೆದಿವೆ. ಅಲ್ಲದೇ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲವಾಗಿದೆ. ಈ ಬಾರಿಯಾದರೂ ಬಿಜೆಪಿ ಅಂತಹ ಅವಕಾಶ ನೀಡದಂತೆ ಮೇಯರ್, ಉಪ ಮೇಯರ್ ಪಟ್ಟಕ್ಕೆ ಆಯ್ಕೆ ಮಾಡುವುದೋ ಕಾದು ನೋಡಬೇಕಾಗಿದೆ.

 

ಬಿಜವಾಡ ಕುಟುಂಬದ 2ನೇ ಉಪಮೇಯರ್?
ಈ ಬಾರಿಯೇನಾದರೂ ಬಿಜೆಪಿ ದುರ್ಗಮ್ಮ ಬಿಜವಾಡ ಅವರಿಗೆ ಉಪಮೇಯರ್ ಪಟ್ಟ ನೀಡಿದಲ್ಲಿ ಆ ಕುಟುಂಬದ ಎರಡನೇ ಉಪ ಮೇಯರ್ ಆಗಲಿದ್ದಾರೆ. ಈ ಹಿಂದೆ ಅದೇ ಕುಟುಂಬದ ಕು. ಲಕ್ಷ್ಮಿಬಾಯಿ ಬಿಜವಾಡ ಸಹ ಉಪ ಮೇಯರ್ ಆಗಿದ್ದರು.

 

ದಿ. 28ರಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಹಾಗೂ ಶಾಸಕರ ಸಮಕ್ಷಮ ಬಿಜೆಪಿ ಪಾಲಿಕೆ ಸದಸ್ಯರ ಸಭೆ ಕರೆದು ಚರ್ಚಿಸಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಗುವುದು.
ತಿಪ್ಪಣ್ಣ ಮಜ್ಜಗಿ, ಮಹಾನಗರ ಅಧ್ಯಕ್ಷ

administrator

Related Articles

Leave a Reply

Your email address will not be published. Required fields are marked *