ಕೊಲೆ ಸ್ಥಳಕ್ಕೆ ಭೇಟಿ – ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿದ್ಧತೆ
ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಸಿಬಿಐ ತಂಡವು ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿದೆ. ಪ್ರಕರಣ ಕುರಿತು ಮತ್ತಷ್ಟು ತನಿಖೆ ನಡೆಸುವ ಉದ್ದೇಶದಿಂದ ತಂಡ ಆಗಮಿಸಿ ಚಟುವಟಿಕೆ ತೀವ್ರಗೊಳಿಸಿದೆ.
ಸಿಬಿಐ ತಂಡದ ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡವು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಅಲ್ಲದೇ ಯೋಗೀಶಗೌಡ ಹತ್ಯೆಯಾದ ಸಪ್ತಾಪುರ ಬಡಾವಣೆಯಲ್ಲಿದ್ದ ಆಗಿನ ಉದಯ ಜಿಮ್‌ಗೂ ಸಿಬಿಐ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ಪಬ್ಲಿಕ್ ಪ್ರಾಸಿಕ್ಯುಟರ್ ಗಂಗಾಧರ ಶೆಟ್ಟಿ ಅವರನ್ನು ಭೇಟಿ ಮಾಡಿ ಆ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಅವರೊಂದಿಗೆ ಸಿಬಿಐ ತಂಡ ಹಂಚಿಕೊಂಡಿದೆ. ಯೋಗೀಶಗೌಡ ಹತ್ಯೆ ಪ್ರಕರಣದ ಸಾಕ್ಷಿ ನಾಶ ಆರೋಪದ ಪ್ರಮುಖ ಆರೋಪಿಯಾಗಿರುವ ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧ ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿಬಿಐ ತಂಡ ನಗರಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ ಯೋಗೀಶಗೌಡ ಹತ್ಯೆಯಾದ ಅಂದಿನ ಉದಯ್ ಜಿಮ್ ಸ್ಥಳಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣದತ್ತ ಎಲ್ಲರ ಚಿತ್ತ ನೆಡುವಂತಾಗಿದೆ. ಜೊತೆಗೆ ಹಲವರಲ್ಲಿ ನಡುಕ ಹುಟ್ಟಲು ಆರಂಭವಾಗಿದೆ.
2016 ರ ಜೂ.15 ರಂದು ಹೆಬ್ಬಳ್ಳಿ ಕ್ಷೇತ್ರದ ಜಿಪಂ ಸದಸ್ಯನಾಗಿದ್ದ ಯೋಗೀಶಗೌಡ ಗೌಡರನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಅನೇಕರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ ಕುಲಕರ್ಣಿ ಕೂಡ ಬಂಧಿತರಾಗಿದ್ದರು.
ನಂತರ ಕುಲಕರ್ಣಿ ಅವರು ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸುವುದು, ಧಾರವಾಡ ಜಿಲ್ಲೆಯ ಪ್ರವೇಶಕ್ಕಿರುವ ನಿರ್ಬಂಧ ತೆರವುಗೊಳಿಸುವುದು ಸೇರಿದಂತೆ ಸಲ್ಲಿಸಿದ್ದ ಅನೇಕ ಮನವಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.