ರೇಸ್‌ನಲ್ಲಿ ಕಮತಿ, ಸಾಲಮನಿ, ಕವಿತಾ, ಶಂಕರ, ಇಮ್ರಾನ್, ಆರೀಫ್
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆಯಾಗಿದ್ದು ಆಡಳಿತ ಪಕ್ಷದ ಸಭಾನಾಯಕರಾಗಿ ಹಿರಿಯ ಸದಸ್ಯ ವೀರಣ್ಣ ಸವಡಿ ನಿಯುಕ್ತಿಗೊಂಡಿದ್ದು ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕನ ಸ್ಥಾನ ಪಟ್ಟ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಈಗಾಗಲೇ ಮೊದಲ ಎರಡು ಅವಧಿ ದೊರೆರಾಜ ಮಣಿಕುಂಟ್ಲ( ಪೂರ್ವ), ಸುವರ್ಣಾ ಕಲಕುಂಟ್ಲ( ಸೆಂಟ್ರಲ್) ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದು, ಈ ಬಾರಿ ಪಶ್ಚಿಮ ಅಥವಾ ಧಾರವಾಡ ಗ್ರಾಮೀಣದ ಪಾಲಾಗುವುದು ಬಹುತೇಕ ನಿಶ್ಚಯವಾಗಿದ್ದು ನಾಲ್ಕೈದು ಸದಸ್ಯರ ಪೈಪೋಟಿ ಇದೆ.
ಧಾರವಾಡದಿಂದ ಚುನಾಯಿತರಾದವರೆಲ್ಲ ಮೊದಲ ಬಾರಿ ಪಾಲಿಕೆ ಹೊಸ್ತಿಲು ತುಳಿದವರೇ ಆಗಿದ್ದು ಅವರಲ್ಲೊಬ್ಬರಿಗೆ ಖಚಿತ ಎನ್ನಲಾಗುತ್ತಿದೆ. ನಾಲ್ಕನೇ ವಾರ್ಡಿನಿಂದ ಚುನಾಯಿತರಾದ ರಾಜಶೇಖರ ಕಮತಿ, ಶಂಭುಗೌಡ ಸಾಲಮನಿ( 15), ಕವಿತಾ ದಾನಪ್ಪ ಕಬ್ಬೇರ( 20), ಶಂಕರ ಹರಿಜನ( 31),ಇಮ್ರಾನ್ ಯಲಿಗಾರ( 33) ಅಲ್ಲದೇ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಆರೀಫ ಭದ್ರಾಪುರ(53) ಇವರುಗಳ ಹೆಸರುಗಳ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ.
ಈಗಾಗಲೇ ಕಾಂಗ್ರೆಸ್ ಶಾಸಕರುಗಳಾದ ವಿನಯ ಕುಲಕರ್ಣಿ,ಪ್ರಸಾದ ಅಬ್ಬಯ್ಯ, ಮುಖಂಡ ದೀಪಕ ಚಿಂಚೋರೆ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಜತೆ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಒಂದು ಸುತ್ತಿನ ಚರ್ಚೆಯನ್ನು ವಿಪಕ್ಷ ನಾಯಕನ ವಿಚಾರದಲ್ಲಿ ಮಾಡಿದ್ದಾರೆ. ದಿ.೧೫ರ ನಂತರ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಮೇಯರ್ , ಸಭಾನಾಯಕ , ಇಬ್ಬರೂ ಅನುಭವಿಗಳಿರುವುದರಿಂದ ಸಮರ್ಥವಾಗಿ ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ನಿಶ್ಚಯಿಸಿದ್ದು, ಧಾರವಾಡಕ್ಕೆ ಧಕ್ಕುವದು ಖಚಿತವಾಗಿದ್ದರೂ ಚರ್ಚೆಯ ನಂತರ ಒಮ್ಮತದ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಈ ತಿಂಗಳಾಂತ್ಯಕ್ಕೆ ನೂತನ ಮೇಯರ್ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ನಡೆಯಲಿದ್ದು ಅಷ್ಟರೊಳಗೆ ವಿಪಕ್ಷ ನಾಯಕ ನಿಯುಕ್ತಿಗೊಳ್ಳಬೇಕಿದೆ.