ಶೈಕ್ಷಣಿಕ ಹಾದಿಯಲ್ಲಿ ನಾಜನೀನ ಇಸ್ಮಾಯಿಲ್ ತಮಟಗಾರ ಹೊಸ ಮೈಲುಗಲ್ಲು
ಧಾರವಾಡ : ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರ ಪುತ್ರಿ ನಾಜನೀನ ತಮಾಟಗಾರ ತಮ್ಮ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಮೂಲಕ ತಂದೆ-ತಾಯಿ ಹಾಗೂ ಧಾರವಾಡ ನಗರದ ಕೀರ್ತಿ ಹೆಚ್ಚಿಸಿದ್ದಾಳೆ.
ಉತ್ತರಾಖಾಂಡ ರಾಜ್ಯದ ರೂರಕೆ ಐಐಟಿಯಲ್ಲಿ ಬಿ.ಆರ್ಕಿಟೆಕ್ಚರ್ ಕೋರ್ಸ್ನಲ್ಲಿ ’ಕ್ಯುಮಿಲೆಟಿವ್ ಗ್ರೇಡ್ ಪಾಯಿಂಟ್ನಲ್ಲಿ ಹೈಯಸ್ಟ್ ಆವರೇಜ್ ಪಾಯಿಂಟ್’ ಗಳಿಸಿದ್ದು, ಐಐಟಿ ಅಕಾಡೆಮಿಕ್ ಅಪೇರ್ಸ್ ಡೀನ್ ನವೀನ್ ನವಣಿ ಅವರು ವಿದ್ಯಾರ್ಥಿನಿ ನಾಜನೀನರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.
ಬಾಲ್ಯದಿಂದಲೇ ಅತ್ಯಂತ ಜಾಣ ವಿದ್ಯಾರ್ಥಿನಿಯಾಗಿರುವ ನಾಜನೀನ ಹತ್ತನೇ ತರಗತಿಯಲ್ಲಿಯೂ ತಾನು ಓದುತ್ತಿದ್ದ ಮಹಾರಾಷ್ಟ್ರದ ಪಂಚಗಣಿಯ ನ್ಯೂ ಏರಾ ಸಿಬಿಎಸ್ಇ ಹೈಸ್ಕೂಲ್ನಲ್ಲಿ ಶೇ. 98 ಅಂಕ ಗಳಿಸುವ ಮೂಲಕ ಶಾಲೆಗೆ ಫಸ್ಟ್ ಬಂದಿದ್ದರು. ರಾಜಕೀಯದಲ್ಲಿ ತೊಡಗಿಸಿಕೊಂಡವರು ತಮ್ಮ ಮಕ್ಕಳ ಓದಿನ ಬಗ್ಗೆ ಅಷ್ಟೊಂದು ಚಿಂತಿಸುವುದಿಲ್ಲ. ಏಕೆಂದರೆ ಅವರು ಒಂದು ಸ್ಥಾನಕ್ಕೆ ಕರೆದೊಯ್ಯುತ್ತಾರೆ ಎಂದು ಭಾವಿಸುವವರೇ ಹೆಚ್ಚು. ಆದರೆ, ಕಾಂಗ್ರೆಸ್ ಪಕ್ಷದ ನಾಯಕ, ಧಾರವಾಡ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರ ಮಗಳು ರಾಜಕೀಯ ಮುಕ್ತ ವಾತಾವರಣದಲ್ಲಿ ಸಾಧನೆ ಮಾಡಿದ್ದು ವಿಶೇಷ ಎನಿಸಿದೆ. ಇದು ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೂ ಹೆಮ್ಮೆಯ ಸಾಧನೆ.
ಓದಿನಲ್ಲಿ ಪ್ರತಿ ಕ್ಲಾಸಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ತಂದೆ, ತಾಯಿಗೆ ಅತ್ಯಂತ ಖುಷಿಯ ಸಂಗತಿಯಾಗಿದೆ.
ಶಾಲೆಯಲ್ಲಿ 8 ಹೊಸ ದಾಖಲೆ ಮಾಡಿದ್ದರು. ಕಥಕ್ ಪ್ರವೀಣೆ : ಕಥಕ್ ನೃತ್ಯದಲ್ಲೂ ಅತ್ಯುತ್ತಮ ಸಾಧನೆ ಮಾಡಿರುವ ನಾಜನೀನ ಆ ಪರೀಕ್ಷೆಯಲ್ಲೂ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿ ಹಿರಿಮೆ ಮೆರೆದಿದ್ದಾಳೆ. ನಾಜನೀನ್ ಸಾಧನೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ಖಾನ್ ಹಾಗೂ ಧಾರವಾಡ ಅಂಜುಮನ್ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಓದಿನ ಜೊತೆಗೆ ಆಟೋಟ, ಕಲೆ ಕೂಡ ಮುಖ್ಯ
ಓದುವ ಮನಸ್ಸು ಮುಖ್ಯವೇ ಹೊರತು. ಹೆಚ್ಚು ಹೊತ್ತು ಓದುವುದೇ ಮುಖ್ಯವಲ್ಲ. ಗರಿಷ್ಠ ಅಂಕ ಪಡೆಯಲು ಬರೀ ಓದುತ್ತಲೇ ಇರಬೇಕು ಎಂದು ನನಗೆ ಅನಿಸುತ್ತಿಲ್ಲ. ಆಟ ನಮ್ಮನ್ನು ಶಾರೀರಿಕವಾಗಿ ಗಟ್ಟಿಯಾಗಲು, ಆರೋಗ್ಯವಾಗಿರಲು ಮುಖ್ಯವಾದರೆ, ಡ್ರಾಯಿಂಗ್ ನಮ್ಮಲ್ಲಿ ಏಕಾಗ್ರತೆ ಮೂಡಿಸುವುದರ ಜೊತೆಗೆ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಓದಿನಷ್ಟೇ ಆಟ, ಸಾಂಸ್ಕೃತಿಕ ಚಟುವಟಿಕೆ ಮತ್ತು ಹಾಡು, ಕುಣಿತ ಸಿನಿಮಾ ನೋಡುವುದನ್ನು ಮಾಡಬೇಕು. ನಿತ್ಯವೂ ಓದಬೇಕು. ಪರೀಕ್ಷೆ ಎರಡು ತಿಂಗಳಿದ್ದಾಗ ಓದಿನ ಕಡೆಗೆ ಹೆಚ್ಚು ಗಮನ ಹರಿಸಿದರೆ ಸಾಕು. ನನಗೆ ಇದು ಸಾಧ್ಯವಿಲ್ಲ ಎಂಬ ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುವ ನಾಜನೀನ ತಂದೆ-ತಾಯಿ ಹಾಗೂ ಐಐಟಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.