ಗಾಯಕಿ ಸಂಗೀತಾ ಕಟ್ಟಿ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು
ಧಾರವಾಡ: ಕಾಸ್ಮಸ್ ಕ್ಲಬ್ ಧಾರವಾಡದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಅವರು ಇಲ್ಲಿಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಜರುಗಿದ ಪ್ರತಿಷ್ಠಿತ ಕಾಸ್ಮಸ್ ಕ್ಲಬ್ನ ಶತಮಾನೋತ್ಸವ ಕಾರ್ಯಕ್ರಮವನ್ನು ವಿಧಾನಸಭಾ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಉದ್ಘಾಟಿಸಿ ಮಾತನಾಡಿದರು.
1924ರಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿರುವ ಈ ಕ್ಲಬ್, ತನ್ನ ಸದಸ್ಯರಿಗೆ ಬರೀ ಮನೋರಂಜನೆ ಮಾತ್ರವಲ್ಲದೇ ಕ್ರೀಡಾಸ್ಫೂರ್ತಿ ತುಂಬುವ, ಕ್ರೀಡಾಪಟುಗಳನ್ನು ಸಿದ್ಧಗೊಳಿಸುವ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕಾರ್ಯಚಟು ವಟಿಕೆ ಮಾಡಲು ಪ್ರೋತ್ಸಾಹಿಸುತ್ತಿದೆ ಎಂದರು.
ಯಾವುದೇ ಒಂದು ಸಂಘ-ಸಂಸ್ಥೆ ನೂರು ವರ್ಷಗಳನ್ನು ಪೂರೈಸುವುದು ಸಾಮಾನ್ಯದ ಸಂಗತಿ ಏನಲ್ಲ. ಆಗು-ಹೋಗುಗಳ ಮಧ್ಯೆ ನೂರು ವರ್ಷಗಳ ಕಾರ್ಯ ಉಳಿದು ಸಮಾಜದಲ್ಲಿ ತನ್ನದೇ ಬ್ರಾಂಡ್ ಬೆಳೆಸಿಕೊಂಡಿರುವ ಸಂಖ್ಯೆಗಳ ಪೈಕಿ ಶತಮಾನದ ಸಂಭ್ರಮದಲ್ಲಿರುವ ಕಾಸ್ಮಸ್ ಕ್ಲಬ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದರು.
ಕ್ಲಬ್ ಅಧ್ಯಕ್ಷ ನಿತಿನ ಟಗರಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಲಬ್ ಆವರಣದಲ್ಲಿ ಕ್ರೀಡಾ ಸಂಕಿರ್ಣವಿದ್ದು, ಟೇಬಲ್ ಟೆನಿಸ್, ಸ್ನೂಕರ್, ಬಿಲಿಯಾರ್ಡ ಹಾಗೂ ಜಿಮ್ ಒಳಗೊಂಡಿದೆ. ನಿತ್ಯ ಹತ್ತಾರು ವಿದ್ಯಾರ್ಥಿಗಳು, ಸದಸ್ಯರು ಈ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ಲಬ್ನಲ್ಲಿ ತರಬೇತಿ ಪಡೆದು ಆಟವಾಡಿ ಅನೇಕ ಆಟಗಾರರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾಸ್ಮಸ್ ಕ್ಲಬ್ ಕ್ರೀಡೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲೂ ತೊಡಗಿದೆ. ಕೋವಿಡ್ ಮತ್ತು ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಕ್ಲಬ್ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ಲಬ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕ್ಲಬ್ ನ ಮಾಜಿ ಅಧ್ಯಕ್ಷರಾದ ಎ.ಬಿ.ದೇಸಾಯಿ, ವಿ.ಡಿ.ಕಾಮರಡ್ಡಿ, ಎನ್.ವಿ.ಬಿದರಿಮಠ, ಸಿ.ವಿ.ಮಠದ, ಎನ್.ಕೆ.ಎಲ್.ಮಾಡೂಳ್ಳಿ, ಡಿ.ಎ.ಚಿಪ್ರೆ, ಎ.ಸಿ.ಪುರದ, ಬಿ.ಎಸ್.ಭಟ್, ರವಿ ನಾಯಕ, ರವಿ ಗಾಂವಕರ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಎಮ್.ಎಮ್.ಹಿರೇಮಠ, ಗೌರವ ಕಾರ್ಯದರ್ಶಿ ಅಶೋಕ ಎಸ್.ಹಿರೇಮಠ, ಖಂಜಾಂಚಿ ಎಸ್.ಬಿ.ಕಿತ್ತೂರ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯ ಸುಣಗಾರ, ಎಮ್.ಎಸ್.ಹಾಲಭಾವಿ, ಎ.ಎಸ್.ಗುಡ್ಡದಮಠ, ಸಿ.ಎಚ್.ಜೋಗಿಹಳ್ಳಿ, ಬಿ.ಎನ್.ಜಮಖಂಡಿ, ಎಚ್.ಎಫ್.ಹೆಬ್ಬಾಳ, ಎಸ್.ಎಸ್.ಲಕ್ಕಣ್ಣವರ, ಅಶೋಕ ಪಾಟೀಲ ಸೇರಿದಂತೆ ಇತರರಿದ್ದರು.
ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳಿಂದ ಸ್ವಾಗತ ಗೀತೆ ಪ್ರಸ್ತುತಿ ಪಡಿಸಿದರು. ವೇದಿಕೆ ಕಾರ್ಯಕ್ರಮ ನಂತರ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಎಸ್.ಎಮ್.ರುದ್ರಸ್ವಾಮಿ ವಂದಿಸಿದರು.