102ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
ಹುಬ್ಬಳ್ಳಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್‌ರ ಕುರಿತು ಸಂಸತ್ ಅಧಿವೇಶನದಲ್ಲಿ ಅವಮಾನಕರ ಹೇಳಿಕೆ ನೀಡಿರುವುದನ್ನು ಖಂಡಿಸಿ ಮತ್ತು ಅವರ ರಾಜೀನಾಮೆಗೆ ಆಗ್ರಹಿಸಿ ನೂರಕ್ಕೂ ಹೆಚ್ಚು ಸಂಘಟನೆಗಳು ದಿ.೯ರಂದು ಗುರುವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಬಂದ್‌ಗೆ ಕರೆ ನೀಡಿವೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
ಸಂವಿಧಾನ ಶಿಲ್ಪಿಯ ಬಗೆಗೆ ಅವಮಾನದ ಹೇಳಿಕೆ ನೀಡಿರುವ ಅಮಿತ್ ಶಾ ಹೇಳಿಕೆ ಖಂಡಿಸಿ ದಿ. 9ರಂದು ಬೆಳಿಗ್ಗೆ ೬ರಿಂದ ಸಾಯಂಕಾಲ 6ರವರೆಗೆ ಬಂದ್ ಆಚರಣೆಗೆ ದಿ. 4 ಮತ್ತು 5ರಂದು ಹುಬ್ಬಳ್ಳಿ ಹಾಗೂ ಧಾರವಾಡ ಪ್ರವಾಸಿ ಮಂದಿರಗಳಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಈ ಬಂದ್‌ಗೆ ಅವಳಿನಗರದ ಸುಮಾರು 102ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದರು.
ಪಕ್ಷಾತೀತವಾಗಿ ಈ ಬಂದ್‌ಗೆ ಕರೆ ನೀಡಿದ್ದು, ವಿವಿಧ ಬಡಾವಣೆಗಳಿಂದ ಮೆರವಣಿಗೆ ಮೂಲಕ ಆಗಮಿಸಿ ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತ ಮತ್ತು ಧಾರವಾಡದ ಜುಬಿಲಿ ವೃತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂವಿಧಾನ ಮತ್ತು ಸಂವಿಧಾನಶಿಲ್ಪಿಯನ್ನ ಗೌರವಿಸೋ ಮೀಸಲು ವರ್ಗದ ಎಲ್ಲ ಸಮುದಾಯದ ಪ್ರಮುಖರು ಭಾಗವಹಿಸುವ ಮೂಲಕ ದೇಶಪ್ರೇಮ ಮೆರೆಯಲು ಮನವಿ ಮಾಡಿದ ಮುಖಂಡರು, ಅವಳಿನಗರದಲ್ಲಿ ಸಾರ್ವಜನಿಕರು ಅಂದು ಯಾವುದೆ ಕೆಲಸ ಕಾರ್ಯ ಗಳನ್ನ ಹಮ್ಮಿಕೊಳ್ಳದೇ ವಾಹನ ಸಂಚಾರ ಮತ್ತು ವಾಣಿಜ್ಯ ವ್ಯವಹಾರ ಹೋಟೆಲ್ ಸಿನಿಮಾ ಆಟೋ, ಶಾಲಾ ಕಾಲೇಜು, ಸರ್ಕಾರಿ ಕಚೇರಿ, ವಾಹನ ಸಹಿತ ಸಕಲ ಚಟುವಟಿಕೆ ಬಂದ್ ಮಾಡಲು ಮುಖಂಡರು ವಿನಂತಿಸಿದರು.
ಗೋಷ್ಠಿಯಲ್ಲಿ ಮಾತನಾಡಿದ ಅಭಿಮಾನಿ ಬಳಗದ ಪ್ರಮುಖರಾದ ಗುರುನಾಥ ಉಳ್ಳಿಕಾಶಿ,ಮಾರುತಿ ದೊಡ್ಡಮನಿ, ಎಮ್ ಅರವಿಂದ್, ಶ್ಯಾಮ ಜಾಧವ, ಶಂಕರ ಅಜಮನಿ,ದೊರೆರಾಜ ಮನಿಕುಂಟ್ಲ, ಸುರೇಶ ಕನ್ನಮಕ್ಕಲ್ಲ, ಸುವರ್ಣ ಕಲಕುಂಟ್ಲ, ನಾಗೇಶ ಕತ್ರಿಮಲ್ಲ, ಪ್ರಭು ಪ್ರಭಾಕರ,ಶ್ರೀನಿವಾಸ ಬೆಳದಡಿ, ಮಲ್ಲಿಕಾರ್ಜುನ ಬಿಳಾರ, ಪ್ರೇಮನಾಥ ಚಿಕ್ಕತುಂಬಳ, ರವಿ ಕದಂ, ದೇವಣ್ಣ ಇಟಗಿ ಮಾಹಿತಿ ನೀಡಿ ಬಂದ್ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.