ಸರಕಾರ ಮಧ್ಯ ಪ್ರವೇಶ ಅಗತ್ಯ
ಧಾರವಾಡ : ಕಬ್ಬಿನ ಬಿಲ್ ಪಾವತಿಸಲು ವಿಳಂಬ ಮಾಡುತ್ತಿರುವ ಕಾರಖಾನೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಬೇಕಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿಯಲ್ಲಿರುವ ಮೈಲಾರ ಶುಗರ್ಸ್ ಲಿ. ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ವಿಳಂಬ ಮಾಡುತ್ತಿರುವ ಕಾರಖಾನೆ.ಜಿಲ್ಲೆಯ ಕಲಘಟಗಿ, ಅಳ್ನಾವರ ತಾಲೂಕಿನ ಬಹುತೇಕ ಮತ್ತು ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ, ಅಂಬ್ಲಿಕೊಪ್ಪ, ಮನಸೂರು, ಮನಗುಂಡಿ, ನಿಗದಿ, ಬೆನಕಟ್ಟಿ, ಮುಮ್ಮಿಗಟ್ಟಿ ಇತರ ಗ್ರಾಮಗಳ ರೈತರು ಕಾರಖಾನೆಗೆ ಸಾವಿರಾರು ಟನ್ ಕಬ್ಬು ಕಳಿಸಿ ಇದೀಗ ತೊಂದರೆಗೆ ಒಳಗಾಗಿದ್ದಾರೆ.
ಕಬ್ಬು ಕಳಿಸಿದ 40 ದಿನಗಳ ಒಳಗಾಗಿ ಪ್ರತಿ ಟನ್‌ಗೆ 2995 ರೂಪಾಯಿಯಂತೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಕಾರಖಾನೆವತಿಯಿಂದ ಕಬ್ಬು ಕಟಾವಿಗೆ ಸಕಾಲದಲ್ಲಿ ಗ್ಯಾಂಗ್ ಕಳಿಸಿ ಸಹಕರಿಸಿದ್ದ ಮೈಲಾರ ಶುಗರ್ಸ್, ಈಗ ನಾಲ್ಕು ತಿಂಗಳು ಕಳೆದರೂ ರೈತರಿಗೆ ಬಿಲ್ ಪಾವತಿಸಿಲ್ಲ. ಕಾರಖಾನೆಯ ಆಡಳಿತ ಮಂಡಳಿಯ ಭರವಸೆ ನಂಬಿ ರೈತರು ಕಬ್ಬು ಕಳಿಸಿದರು. ಆದರೆ, ಈಗ 4 ತಿಂಗಳು ಕಳೆದರೂ ಸಕಾರಾತ್ಮಕವಾಗಿ ಕಾರಖಾನೆ ಸ್ಪಂದಿಸುತ್ತಿಲ್ಲ. ಇದರಿಂದ ಕಬ್ಬಿನ ಹಣ ನಂಬಿ ಮದುವೆ ಇನ್ನಿತರ ಖರ್ಚು-ವೆಚ್ಚಗಳಿಗೆ ಸಂಘ-ಬ್ಯಾಂಕ್, ಕಿರು ಹಣಕಾಸು ಸಂಸ್ಥೆಗಳು, ಖಾಸಗಿಯವರಿಂದ ಸಾಲ ಪಡೆದ ರೈತರು, ಬಿಲ್ ಪಾವತಿಸದ ಕಾರಖಾನೆಯ ವಿಳಂಬದಿಂದ ಇದೀಗ ಕೈ ಹಿಚುಕಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಬಿಲ್ ಪಾವತಿ ವಿಳಂಬ ಆಗುತ್ತಿರುವ ಕುರಿತು ರೈತರು ಹುಬ್ಬಳ್ಳಿಯಲ್ಲಿರುವ ಕಾರಖಾನೆಯ ಅಧೀಕೃತ ಕಚೇರಿಗೆ ತೆರಳಿ ವಿಚಾರಿಸಿದಾಗ, 2-3 ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ರೈತರಿಗೆ ಒಂದು ರೂಪಾಯಿ ತಲುಪಿಲ್ಲ.
ರೈತರಿಂದ ಹಲವಾರು ದಾಖಲೆಗಳಿಗೆ ಸಹಿ ಪಡೆದಿರುವ ಕಾರಖಾನೆಯ ಆಡಳಿತ ಮಂಡಳಿ, ಬಾಕಿ ಉಳಿದ ಕಬ್ಬಿನ ಬಿಲ್‌ಗೆ ಬಡ್ಡಿ ಸಹಿತ ಕೊಡುವುದಾಗಿ ಹೇಳುತ್ತಿದೆ. ಆದರೆ, ತಮಗೆ ಬಡ್ಡಿ ಬೇಡ ತಮಗೆ ಬರಬೇಕಿರುವ ಬಿಲ್ ಮಾತ್ರ ಪಾವಸಲು ಪರಿಪರಿಯಾಗಿ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ತಮಗೆ ಬರಬೇಕಿರುವ ‘ಹಣಕ್ಕೆ ಬಡ್ಡಿ ಬೇಡ, ಬಿಲ್ ಮಾತ್ರ ಪಾವತಿಸಿ’ ಎಂದು ರೈತರು ಕಾರಖಾನೆಯ ಕಚೇರಿಗೆ ತೆರಳಿ ಒತ್ತಾಯಿಸಿದರೂ ಕಾರಖಾನೆಯ ಆಡಳಿತ ಹಣ ನೀಡುತ್ತಿಲ್ಲ.
ಇತರ ಬೆಳೆಗಳನ್ನು ನಂಬಿದರೆ ವಾತಾವರಣ ಏರುಪೇರು, ಕಡಿಮೆ ಇಳುವರಿ, ಅಧಿಕ ವೆಚ್ಚ, ಸರಿಯಾದ ಧಾರಣಿ ಸಿಗದಿರುವುದು ಮತ್ತಿತರ ಕಾರಣಗಳಿಂದ ಕಬ್ಬು ಬೆಳೆಯುತ್ತಿದ್ದೆವೆ. ಆದರೆ, ಸರಿಯಾದ ಸಮಯಕ್ಕೆ ಕಬ್ಬಿನ ಬಿಲ್ ಕೈ ಸೇರದಿರುವುದು ಕುಟುಂಬ ನಿರ್ವಹಣೆಗೆ ಅಚಣಿಯಾಗಿದೆ ಎನ್ನುತ್ತಿದ್ದಾರೆ ರೈತರು. ಈ ಮಧ್ಯೆ ‘ಮೈಲಾರ ಶುಗರ್ಸ್ ಲಿ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ಕಾರಣದಿಂದ ಬಿಲ್ ಪಾವತಿ ಮಾಡುತ್ತಿಲ್ಲ’ ಎಂಬ ವದಂತಿ ಹರಡಿದ್ದು, ಕಬ್ಬು ಕಳಿಸಿದ ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಕೃಷಿಯ ಅತ್ಯಧಿಕ ಖರ್ಚು, ಕಾರ್ಮಿಕರ ಕೊರತೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ರೈತ ಸಮುದಾಯ ಎದುರಿಸುತ್ತಿದೆ. ಇನ್ನೊಂದೆಡೆ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಸಕಾಲಕ್ಕೆ ರೈತರಿಗೆ ಬಿಲ್ ಪಾವತಿಸದಿರುವುದು ರೈತರ ಜೀವನದ ಜೊತೆ ಚೆಲ್ಲಾಟ ಆಡುವಂತಾಗಿದೆ.
ಸರಕಾರ ಮಧ್ಯ ಪ್ರವೇಶ ಅಗತ್ಯ
ರೈತರಿಗೆ ನೀಡಿದ ಭರವಸೆಯಂತೆ ಬಿಲ್ ಪಾವತಿಸಲು ಮೈಲಾರ ಶುಗರ್ಸ್ ಲಿ. ತಪ್ಪಿರುವ ಬಗ್ಗೆ ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಬೇಕಿದೆ. ಶೀಘ್ರ ಕೋಟ್ಯಾಂತರ ರೂಪಾಯಿಗಳಷ್ಟು ಬಿಲ್ ಪಾವತಿಸುವ ಕುರಿತು ಕಾರಖಾನೆಯ ಆಡಳಿತ ಮಂಡಳಿಯ ಜೊತೆ ಚರ್ಚಿಸಲು ಸಕ್ಕರೆ ಇಲಾಖೆ ಮುಂದಾಗಬೇಕಿದೆ. ತೊಂದರೆಗೆ ಸಿಲುಕಿರುವ ರೈತರ ಕಲಘಟಗಿ-ಅಳ್ನಾವರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಇನ್ನಿತರ ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಬೇಕಿದೆ. ಜಿಲ್ಲಾ ಆಡಳಿತ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ.