ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡಕ್ಕೆ ಜ್ಯೋತಿ ಬೆಳಕು.. ಹುಬ್ಬಳ್ಳಿಗೆ ಸಂತೋಷ..

ಧಾರವಾಡಕ್ಕೆ ಜ್ಯೋತಿ ಬೆಳಕು.. ಹುಬ್ಬಳ್ಳಿಗೆ ಸಂತೋಷ..

ಪಾಟೀಲರು ಹು-ಧಾ ಮಹಾನಗರ ಮೇಯರ್, ಚವ್ಹಾಣ ಉಪಮೇಯರ್

ಬಿಜೆಪಿ ಡ್ಯಾಮೇಜ್ ಕಂಟ್ರೋಲ್?

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಪ್ರಥಮ ಪ್ರಜೆಯಾಗಿ ಧಾರವಾಡದ ಜ್ಯೋತಿ ಪಾಟೀಲ ಹಾಗೂ ಉಪ ಮೇಯರ್ ಆಗಿ ಸೆಂಟ್ರಲ್ ಕ್ಷೇತ್ರದ ಸಂತೋಷ ಚವ್ಹಾಣ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.


ಇಲ್ಲಿನ ಪಾಲಿಕೆ ಸಭಾಭವನದಲ್ಲಿ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ನಡೆದ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ 19ನೇ ವಾರ್ಡಿನ ಸದಸ್ಯೆ ಜ್ಯೋತಿ ಮಹಾಪೌರರಾಗಿ ಆಯ್ಕೆಯಾದರು.
ಜ್ಯೋತಿ ಪರ 47 ಮತ ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ 59ನೇ ವಾರ್ಡಿನ ಸುವರ್ಣ ಕಲಕುಂಟ್ಲ 36, ಎಐಎಂಐಎಂ ಪಕ್ಷದಿಂದ ವಾರ್ಡ್ 76ರ ಸದಸ್ಯೆ ವಹಿದಾಖಾನಂ ಕಿತ್ತೂರು ಮೂರು ಮತ ಪಡೆದರು.


ನಂತರ ನಡೆದ ಉಪಮೇಯರ್ ಚುನಾವಣೆಯಲ್ಲಿ 41ನೇ ವಾರ್ಡಿನ ಸದಸ್ಯ ಸಂತೋಷ ಚವ್ಹಾಣ ಸಹ ೪೭ ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ೧೪ನೇ ವಾರ್ಡಿನ ಸದಸ್ಯ ಶಂಭುಲಿಂಗ ಸಾಲಮನಿ ಅವರಿಗೆ ೩೬ ಮತಗಳು ಬಂದವು.
ಮತದಾನ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳಾದ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಸ್.ವಿ.ಸಂಕನೂರ, ಪ್ರಸಾದ ಅಬ್ಬಯ್ಯ ಸೇರಿದಂತೆ ಒಟ್ಟು 90  ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ ೮೭ ಜನರು ಪಾಲ್ಗೊಂಡಿದ್ದರು. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಗೈರು ಹಾಜರಾಗಿದ್ದು ವಿಶೇಷ ಗಮನ ಸೆಳೆಯಿತು.


ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್.ಬಿರಾದಾರ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕೇರಳ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಸಂಜೆ ವೇಳೆಗೆ ನಗರಕ್ಕೆ ಆಗಮಿಸಿದ ಬಳಿಕ ತಡರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ ಮಜ್ಜಗಿ, ನಿಕಟಪೂರ್ವ ಮೇಯರ್ ರಾಮಣ್ಣ ಬಡಿಗೇರ ಅವರನ್ನೊಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಮೊದಲು ಹಿರಿಯ ಪಾಲಿಕೆ ಸದಸ್ಯರ ಹಾಗೂ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಆಲಿಸಲಾಯಿತು. ಬಳಿಕ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಲಾಯಿತು. ನಂತರ ಸಚಿವರು, ಶಾಸಕರು ಪರಸ್ಪರ ಸಮಾಲೋಚಿಸಿ ಮೇಯರ್-ಉಪಮೇಯರ್ ಹೆಸರುಗಳನ್ನು ಗುಪ್ತವಾಗಿ ಇರಿಸಿದ್ದರು. ಇಂದು ಬೆಳಿಗ್ಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ನಂತರ ಜ್ಯೋತಿ ಪಾಟೀಲ ಹಾಗೂ ಸಂತೋಷ ಚವ್ಹಾಣ ಅವರು ಹಿರಿಯರೊಂದಿಗೆ ಜತೆಯಾಗಿ ಪಾಲಿಕೆ ಆವರಣಕ್ಕೆ ಆಗಮಿಸಿ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ನಿಕಟಪೂರ್ವ ಮೇಯರ್ ರಾಮಣ್ಣ ಬಡಿಗೇರ, ಹಿರಿಯ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಈರೇಶ ಅಂಚಟಗೇರಿ, ಮಲ್ಲಿಕಾರ್ಜುನ ಗುಂಡೂರ, ಉಮೇಶಗೌಡ ಕೌಜಗೇರಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಬೀರಪ್ಪ ಖಂಡೇಕರ, ಶಿವು ಮೆಣಸಿನಕಾಯಿ ಇದ್ದರು.


ಅಧಿಸೂಚನೆ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬ’ಗೆ ಮೀಸಲಾಗಿತ್ತು. ಜ್ಯೋತಿ ಪಾಟೀಲ ಹು-ಧಾ ಮಹಾನಗರ ಪಾಲಿಕೆಯ ಎಂಟನೇ ಮಹಿಳಾ ಮೇಯರ್ ಆಗಿದ್ದಾರೆ. ಅವರು ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿದ್ದಾರೆ. ಸಂತೋಷ್ ಚವ್ವಾಣ್ ಅವರು ಮೊದಲ ಬಾರಿಗೆ ಸದಸ್ಯರಾಗಿದ್ದು, ಬಿಜೆಪಿ ಯುವ ಮೋರ್ಚಾ, ಹು-ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಬಿಜೆಪಿ ಡ್ಯಾಮೇಜ್ ಕಂಟ್ರೋಲ್?

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತಂತೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಾಜಿ ಮಹಾಪೌರ ಈರೇಶ ಅಂಚಟಗೇರಿಯವರ ಮೂಲಕ ಕೇಂದ್ರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಗುರುತರ ಆರೋಪವೂ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ವಿಷಯದಲ್ಲಿ ಧಾರವಾಡ ನಗರದಲ್ಲಿ ಬಿಜೆಪಿ ಇಮೇಜ್‌ಗೆ ಸಾಕಷ್ಟು ಡ್ಯಾಮೇಜ್ ಕೂಡ ಆಗಿತ್ತು ಎಂಬ ಚರ್ಚೆಗಳು ನಡೆದಿದ್ದವು. ಅದೇ ಕಾರಣಕ್ಕೆ ಧಾರವಾಡದಲ್ಲುಂಟಾದ ಪಕ್ಷದ ಇಮೇಜ್ ಮರು ಸ್ಥಾಪನೆಗೋಸ್ಕರ ಈಗ ಮಹಾಪೌರ ಪಟ್ಟವನ್ನು ಧಾರವಾಡಕ್ಕೆ ನೀಡಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ, ಕೇವಲ ಮೇಯರ್ ಪಟ್ಟ ನೀಡಿದರೆ ಸಾಲದು ಅದಕ್ಕೆ ತಕ್ಕಂತೆ ನಗರದ ಅಭಿವೃದ್ಧಿಗೂ ಬಿಜೆಪಿ ನಾಯಕರು ಹೆಚ್ಚಿನ ಆದ್ಯತೆ ನೀಡಬೇಕು. ಬಹುದಿನದ ಬೇಡಿಕೆಯಾಗಿರುವ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಹಕರಿಸುವ ಅಗತ್ಯವೂ ಇದೆ ಎಂಬ ಆಶಯ ವಿದ್ಯಾಕಾಶಿಯ ನಾಗರಿಕರದಾಗಿದೆ.

administrator

Related Articles

Leave a Reply

Your email address will not be published. Required fields are marked *