ಯೋಗೀಶಗೌಡ ಗೌಡರ್ ಕೊಲೆ ಕೇಸ್
ಬೆಂಗಳೂರು: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಧಾರವಾಡದ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಜನರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಶುಕ್ರವಾರ ಸಂಜೆ ೪:೨೦ಕ್ಕೆ ಈ ಮಹತ್ವದ ಆದೇಶ ಪ್ರಕಟಿಸಿದರು. ಈ ತೀರ್ಪಿನೊಂದಿಗೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ರದ್ದಾಗಲಿದ್ದು, ಅವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಶಿಕ್ಷೆಯ ವಿವರ:
ವಿನಯ್ ಕುಲಕರ್ಣಿ ಸೇರಿ 16 ಜನರಿಗೆ: ಜೀವಾವಧಿ ಶಿಕ್ಷೆ (ಜೀವ ಇರುವವರೆಗೂ ಕಾರಾಗೃಹ ವಾಸ).
ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ್: ಸಾಕ್ಷ್ಯ ನಾಶಪಡಿಸಿದ ಹಿನ್ನೆಲೆಯಲ್ಲಿ 7 ವರ್ಷ ಕಠಿಣ ಶಿಕ್ಷೆ.
ಖಲಾಸೆ: ಸಂಶಯದ ಲಾಭದ ಮೇಲೆ ವಾಸುದೇವ ರಾಮ ನೀಲಕಂಠಿ ಹಾಗೂ ಸೋಮಶೇಖರ ಬಸಪ್ಪ ನ್ಯಾಮಗೌಡ ಅವರನ್ನು ಬಿಡುಗಡೆ ಮಾಡಲಾಗಿದೆ.
ಮಾಫಿ ಸಾಕ್ಷಿ: ಬಸವರಾಜ ಮುತ್ತಗಿ ಮತ್ತು ಶಿವಾನಂದ ಬಿರಾದಾರ ಅವರನ್ನು ವಿಚಾರಣೆಯಿಂದ ಕೈಬಿಡಲಾಗಿದೆ.
ಸುದೀರ್ಘ ಹೋರಾಟಕ್ಕೆ ಸಂದ ಜಯ:
2016 ರಲ್ಲಿ ಧಾರವಾಡದ ಉದಯ್ ಜಿಮ್ನಲ್ಲಿ ಯೋಗೀಶಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ರಾಜ್ಯ ಪೊಲೀಸರು ಇದೊಂದು ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ನಡೆದ ಕೊಲೆ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ, ಮೃತರ ಕುಟುಂಬಸ್ಥರು ಮತ್ತು ಬಿಜೆಪಿ ಮುಖಂಡರು ಹಣಬಲ, ತೋಳ್ಬಲದ ವಿರುದ್ಧ ಸೆಡ್ಡು ಹೊಡೆದು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಸತತ ಒಂಬತ್ತುವರೆ ವರ್ಷಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಸಿಬಿಐ ತಂಡದ ಭರ್ಜರಿ ಯಶಸ್ಸು:
ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಇದೊಂದು ಕೇವಲ ವ್ಯವಹಾರದ ಕೊಲೆಯಲ್ಲ, ಬದಲಾಗಿ ರಾಜಕೀಯ ಪ್ರೇರಿತ ಕೊಲೆ ಎಂದು ಸಾಕ್ಷ್ಯ ಸಮೇತ ಸಾಬೀತುಪಡಿಸಿದ ಸಿಬಿಐಗೆ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ.
ಕೋರ್ಟ್ ಆವರಣದಲ್ಲಿ ಕಣ್ಣೀರು:
ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ವಿನಯ್ ಕುಲಕರ್ಣಿ ಅವರ ಕುಟುಂಬಸ್ಥರು, ಸಂಬಂಧಿಕರು ಮತ್ತು ಅಭಿಮಾನಿಗಳು ಕಣ್ಣೀರು ಸುರಿಸಿದರು. ಆದೇಶದ ಬೆನ್ನಲ್ಲೇ ಪೊಲೀಸರು ಎಲ್ಲಾ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.
ಅಕ್ಷಯತದಿಗೆ ಅಮವಾಸ್ಯೆ ದಿನದಂದೇ ಹೊರಬಿದ್ದ ಈ ಕರಾಳ ಆದೇಶ ವಿನಯ್ ಕುಲಕರ್ಣಿ ಅವರ ಜೀವನವನ್ನು ಕತ್ತಲೆ ಕೋಣೆಗೆ ನೂಕಿದ್ದು, ಧಾರವಾಡ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.


