ಹುಬ್ಬಳ್ಳಿ: ರಮೇಶ ಜಾರಕಿಹೊಳಿ ಅವರು ಯಾವುದೋ ಉದ್ವೇಗದಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಅವರ ಜೊತೆ ನಾವಿದ್ದೇವೆ. ಸಣ್ಣಪುಟ್ಟ ತೊಂದರೆ ಇದ್ದಲ್ಲಿ ಅವೆಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಶ್ನೆಯೇ ಇಲ್ಲ. ರಮೇಶ ಜಾರಕಿಹೊಳಿ ಅವರ ಜೊತೆ ಹಿಂದೆಯೂ ಇದ್ದೆವು, ಮುಂದೆಯೂ ಅವರ ಜೊತೆಗೆ ಇರುತ್ತೇವೆ. ಎಸ್.ಐ.ಟಿ ತನಿಖೆ ಪ್ರಕರಣ ನಡೆಯುತ್ತಿದೆ. ಏನೂ ತೀರ್ಮಾನ ಆಗುತ್ತೋ ನೋಡೋಣ ಎಂದರು.
ಹು-ಧಾ: ಹು-ಧಾ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಶೇ.೨೫ ರಿಂದ ೩೦ ರಷ್ಟು ಕಾಮಗಾರಿ ಬಾಕಿ ಇದೆ. ಈಗಾಗಲೇ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದು, ಎಲ್ಲೆಲ್ಲಿ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ ಅದನ್ನು ಹೆಚ್ಚು ಕಾರ್ಮಿಕರ ನ್ನು ಬಳಕೆ ಮಾಡಿ ಶೀಘ್ರವಾಗಿ ಮುಗಿಸಲು ಸೂಚಿಸಿದ್ದೇನೆ ಎಂದರು.
ಹು-ಧಾ ಮಹಾನಗರ ಪಾಲಿಕೆಯವರು ೨೪೦ ಕೋಟಿ ರೂಪಾಯಿ ಪ್ರಸ್ತಾವನೆ ಸಹ ಈಗಾಗಲೇ ಕೊಟ್ಟಿದ್ದು, ಸಿಎಂ ಜೊತೆಗೆ ಮಾತನಾಡಿ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದರು.