ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಹೇಳಿದ ಬಳಿಕ ಅವರ ಬೆನ್ನಿಗೆ ನಿಲ್ಲಲು ಮುಂದಾಗಿರುವ ರಾಜ್ಯದ ವಿವಿಧ ಮಠಾಧೀಶರು ನಗರದ ಅರಮನೆ ಮೈದಾನದಲ್ಲಿ ನಾಳೆ ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ.
ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮತ್ತು ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಮಾವೇಶದಲ್ಲಿ ನಾಡಿನ ಎಲ್ಲ ಸಮುದಾಯಗಳ ಸ್ವಾಮೀಜಿಗಳು ಮತ್ತು ಮಾಧ್ಯಮದವರು, ಪೊಲೀಸರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಸಮಾವೇಶದಲ್ಲಿ ನಾಡಿನ ಎಲ್ಲ ಸಮುದಾಯಗಳ ಸುಮಾರು ೧ ಸಾವಿರ ಮಠಾಧೀಶರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಠಗಳ ಪಾತ್ರ. ದೇಶಕ್ಕೆ ಮಠಗಳ ಕೊಡುಗೆ. ಮಠಗಳ ಬಗ್ಗೆ ತಪ್ಪು ಸಂದೇಶದ ಸ್ಪಷ್ಠಿಕರಣ. ಮಠಗಳ ಮತ್ತು ಭಕ್ತರ ನಡುವಿನ ಬಾಂಧ್ಯವ್ಯ ವೃದ್ಧಿಸುವುದು.ಯಡಿಯೂರಪ್ಪನವರನ್ನು ಮಠಾಧೀಶರು ಆಶೀರ್ವದಿಸಿದ ಬಗ್ಗೆ. ಮುಂಬರುವ ೩ನೇ ಅಲೆಯ ಕೊರೊನಾ ಕುರಿತು ಜಾಗೃತಿ ನೀಡುವುದು. ಕೊರೊನಾದಿಂದ ತೊಂದರೆಗೊಳಗಾದ ಅನಾಥ ಮಕ್ಕಳಿಗೆ ಮಠಗಳಲ್ಲಿ ಆಶ್ರಯ ನೀಡುವುದು. ಜಾತ್ಯಾತೀತವಾಗಿ ಎಲ್ಲ ಮಠಗಳಿಗೆ ಸಹಾಯ ಹಸ್ತ ನೀಡಿದ ಸಿಎಂ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುವುದು ಸಹಿತ ಎಂಟು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.