ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಮೊದಲ ಹಂತದಲ್ಲಿ ೧೮ರಿಂದ ೨೦ ಸಚಿವರು ಸೇರ್ಪಡೆಗೊಳ್ಳಲಿದ್ದು, ದಿ.೮ರೊಳಗೆ ಮಂತ್ರಿಮ0ಡಳ ಅಸ್ಥಿತ್ವಕ್ಕೆ ಬರುವುದು ನಿಕ್ಕಿಯಾಗಿದೆ ಎಂದು ಮೂಲಗಳು ಹೇಳಿವೆ.
ಸಂಪುಟವನ್ನು ಸೇರಬಹುದಾದ ಬೊಮ್ಮಾಯಿ ಒಯ್ದಿದ್ದ 21 ಸಚಿವರ ಪಟ್ಟಿಯಲ್ಲಿನ ೬ ಮಂದಿಗೆ ಗ್ರೀನ ಸಿಗ್ನಲ್ ನೀಡಿದ್ದು, ಹೈಕಮಾಂಡ್ ೭ ಮಂದಿಯ ಹೆಸರನ್ನು ಪ್ರಸ್ತಾಪ ಮಾಡಿದೆ ಎನ್ನಲಾಗಿದೆ.
ಬೊಮ್ಮಾಯಿಯವರು ನಾಳೆ ಮತ್ತೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಮಂಗಳವಾರ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಪಟ್ಟಿ ಸಿದ್ಧಗೊಳ್ಳಲಿದ್ದು, ಬುಧವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ತಪ್ಪಿದಲ್ಲಿ ದಿ.೮ರೊಳಗೆ ಖಚಿತ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಎರಡನೇ ಹಂತದಲ್ಲಿ ಕೆಲ ಸಚಿವರು ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಪ್ರಮಾಣವಚನ ಸ್ವೀಕಾರಮಾಡುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಮುಂಬೈ ಗ್ಯಾಂಗ್‌ನ ಬಹುತೇಕರಿಗೆ ಸಚಿವ ಸ್ಥಾನ ಫಿಕ್ಸ ಆಗಿದ್ದು, ಜಾತಿ, ಪ್ರದೇಶ ಅಲ್ಲದೇ ಪಕ್ಷದ ಮೂಲದವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿದ್ದು ದಿಲ್ಲಿಯಲ್ಲಿ ವರಿಷ್ಠರೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆನ್ನಲಾಗಿದೆ.
ಪಕ್ಷ ಸಂಘಟನೆಗೆ ಹಿರಿಯರು
ಬೆಂಗಳೂರು: ಬೊಮ್ಮಾಯಿಯವರ ನೂತನ ಸಂಪುಟಕ್ಕೆ ಹೊಸ ನಾಯಕರನ್ನು ಸಚಿವರನ್ನಾಗಿ ನೇಮಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಹೊಸಬರಿಗೆ ಸಚಿವ ಸ್ಥಾನ ನೀಡಿ ಹಾಗೂ ಅನುಭವವುಳ್ಳ ಹಿರಿಯ ನಾಯಕರಿಗೆ ಪಕ್ಷದ ಬಲ ಹೆಚ್ಚಿಸುವ ಜವಾಬ್ದಾರಿ ನೀಡಲು ವರಿಷ್ಠರು ಮುಂದಾಗಿದ್ದು, ತನ್ಮಧ್ಯೆ
ಕೆ.ಎಸ್.ಈಶ್ವರಪ್ಪ ಅವರು ರಾಜ್ಯದಲ್ಲಿ ಪಕ್ಷದ ಬಲವನ್ನು ಹೆಚ್ಚಿಸುವುದರತ್ತ ಗಮನಹರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮುನೇನಕೊಪ್ಪ ಮುಂಚೂಣಿಯಲ್ಲಿ?
ಹುಬ್ಬಳ್ಳಿ: ನೂತನ ಕ್ಯಾಬಿನೆಟ್‌ನಲ್ಲಿ ಪೇಡೆ ಭಾಗ್ಯ ಯಾರಿಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು ಹಿರಿತನ ಆಧರಿಸಿ ನವಲಗುಂದ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಈ ಬಾರಿ ಮಂತ್ರಿ ಸ್ಥಾನ ನಿರಾಕರಿಸುವುದಾಗಿ ಸ್ಪಷ್ಟವಾಗಿ ಹೇಳಿರುವುದರಿಂದ ಮುನೇನಕೊಪ್ಪ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮ ಘಟ್ಟದವರೆಗೂ ಚಾಲ್ತಿಯಲ್ಲಿದ್ದ ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಜಿಲ್ಲೆಯ ಬಹುತೇಕ ಶಾಸಕರ ಬೆಂಬಲವೂ ಮುನೇನಕೊಪ್ಪರಿಗಿದ್ದು, ಅಲ್ಲದೇ ಜಿಲ್ಲೆಯ ವಿಷಯ ಬಂದಾಗ ಸುಪ್ರಿಮೋಗಳಾಗಿರುವ ಶೆಟ್ಟರ್ ಮತ್ತು ಜೋಶಿಯವರಿಬ್ಬರಿಗೂ ನಿಕಟವಾಗಿರುವುದು ಅನೂಕೂಲಕರವಾಗಿದೆಯಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಜತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ನಿರ್ಗಮಿತ ಸಿಎಂ ಯಡಿಯೂರಪ್ಪ ಹಿಟ್ ಲೀಸ್ಟನಲ್ಲಿ ಅರವಿಂದ ಬೆಲ್ಲದ ಹೆಸರಿದೆ ಎನ್ನಲಾಗಿದೆ.
ಮೊದಲ ಹಂತದ ಪಟ್ಟಿಯಲ್ಲೇ ಮುನೇನಕೊಪ್ಪ ಮಂತ್ರಿ ಆಗಬಹುದು ಎಂಬ ಮಾತು ಕೇಳಿ ಬರುತ್ತದೆ.ಅಲ್ಲದೇ ಈ ಬಾರಿ ಜಿಲ್ಲೆಯ ಗ್ರಾಮೀಣದವರಿಗೆ ನೀಡಬೇಕೆಂಬ ಧ್ವನಿಯೂ ಕೇಳಿ ಬಂದಿದೆ.