ಹುಬ್ಬಳ್ಳಿ: ನಗರದ ಮಿನಿ ವಿಧಾನಸೌಧದಲ್ಲಿರುವ ಖಜಾನೆ ಇಲಾಖೆಯ ನಿವೃತ್ತಿ ವೇತನ ವಿಭಾಗದ ಪ್ರಥಮ ದರ್ಜೆ ಸಹಾಯಕನೋರ್ವ ಇಂದು ಎಸಿಬಿ ಬಲೆಗೆ ಬಿದ್ದಿದ್ದಾನೆ.
ನಿವೃತ್ತ ಎಎಸ್ಐವೊಬ್ಬರ ಪೆನ್ಷನ್ ದಾಖಲೆ ಸರಿಪಡಿಸುವ ನೀಡುವ ಸಂಬ0ಧ 10 ಸಾವಿರ ಬೇಡಿಕೆ ಇಟ್ಟು 3 ಸಾವಿರ ರೂ.ಗೆ ವ್ಯವಹಾರ ಮುಗಿಸಿಕೊಂಡು ಕಚೇರಿಯಲ್ಲಿ ಹಣ ಪಡೆಯುತ್ತಿದ್ದಾಗಲೇ ಎಸಿಬಿ ಡಿಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಪೆನ್ಷನ್ ವಿಭಾಗದ ಅಭಿಲಾಷ ಆಲೂರ ಎಂಬಾತನೇ ಬಲೆ ಬಿದ್ದವನಾಗಿದ್ದು, ಖಜಾನೆ ಅಧಿಕಾರಿಗೆ ನೀಡಬೇಕೆಂದು ಹೇಳಿ ಈತ ಹಣ ಪಡೆಯುತ್ತಿದ್ದರಿಂದ ಅಧಿಕಾರಿ ಪ್ರಕಾಶ ಎಸ್. ಹಳಪೇಟ ಅವರನ್ನೂ ಸಹ ವಿಚಾರಣೆಗೊಳಪಡಿಸಲಾಗಿದೆ. ಇವರ ಹೆಸರಿನಲ್ಲಿಯೇ ಆಲೂರ ಹಣ ಪಡೆಯುತ್ತಿದ್ದರಿಂದ ಇವರ ಪಾಲು ಎಷ್ಟು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಹಾವೇರಿಯಲ್ಲಿ ಎಎಸ್ಐ ಆಗಿ ನಿವೃತ್ತರಾದ ಮಲ್ಲಣ್ಣ ಬಿರಾದಾರ ದೇಸಾಯಿ ಎಂಬುವವರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿತ್ತು. ದೇಸಾಯಿ ನಿವ್ರತ್ತರಾದ ನಂತರ ತಮ್ಮ ನಿವೃತ್ತಿ ವೇತನ ಹುಬ್ಬಳ್ಳಿಯಲ್ಲಿ ದೊರೆಯುವಂತೆ ಮಾಡಿಕೊಳ್ಳಲು ಮನವಿ ಸಲ್ಲಿಸಿದ್ದರು. ಈ ಕುರಿತು ಅನುಮತಿ ದೊರೆತಿದ್ದರೂ ಇಲ್ಲಿನ ಖಜಾನೆ ಇಲಾಖೆಗೆ 5-6 ಸಲ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಎಫ್ಡಿಎ ಅಭಿಷೇಕ ದಾಖಲೆ ಸರಿಮಾಡಿ ಇಲ್ಲಿಯೇ ಪೆನ್ಷನ್ ದೊರಕಿಸಲು 10 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ. ಕೊನೆಗೆ ಮಾತುಕತೆ ನಡೆದು ಇಂದು ಹಣ ಪಡೆವಾಗ ಸಿಕ್ಕಿ ಬಿದ್ದಿದ್ದಾನೆ.
ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನಲ್ಲಿ ಡಿಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸಪೆಕ್ಟರುಗಳಾದ ವೀರಭದ್ರಪ್ಪ ಕಡಿ, ಅಲಿ ಶೇಖ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.